Site icon Ullalavani

‘ಯಕ್ಷಗಾನ ತಾಳಮದ್ದಲೆ ಸಪ್ತಾಹ-2026’ ಉದ್ಘಾಟನೆ ಯಕ್ಷಗಾನದಿಂದ ಸಂಸ್ಕಾರಯುತ ಅರಿವು: ಡಾ.ಎಂ.ಪ್ರಭಾಕರ ಜೋಶಿ

ಕೊಣಾಜೆ; ಸಮಾಜದಲ್ಲಿ ಸಂಸ್ಕಾರಪೂರ್ಣವಾದ ಅರಿವನ್ನು ಬೆಳೆಸಬೇಕಾದರೆ ಯಕ್ಷಗಾನ ಬೆಳೆಯಬೇಕು. ತುಳುನಾಡು ಜಗತ್ತಿಗೆ ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಕೊಡುಗೆಗಳನ್ನು ನೀಡಿದ್ದು, ಅದರಲ್ಲಿ ಯಕ್ಷಗಾನ ಪ್ರಮುಖವಾದುದು ಎಂದು ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಶಿ ಅವರು ಹೇಳಿದರು.


ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಯಕ್ಷಾಂಗಣ ಮಂಗಳೂರು ಇದರ ಆಶ್ರಯದಲ್ಲಿ ಕರ್ನಾಟಕ ಯಕ್ಷಭಾರತಿ ಪುತ್ತೂರು ಇದರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮವಾಗಿ ಆಚರಿಸಲಾಗುವ ಹದಿನಾಲ್ಕನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಲೆ ಸಪ್ತಾಹ-2026’ ವನ್ನು ಭಾನುವಾರದಂದು ಮಂಗಳೂರಿನ ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದರು.
ಭಾಷೆ, ಸಂಬಂಧ, ಕೃಷಿ ಇದನ್ನು ಪೋಷಿಸಿದರೆ ಮಾತ್ರ ಉಳಿಯುತ್ತದೆ. ಹಾಗೆಯೇ ಯಕ್ಷಗಾನವು ಶುದ್ದ ಕನ್ನಡವನ್ನು ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಮಹತ್ತರವಾದ ಕೊಡುಗೆಯನ್ನು ನೀಡಿದೆ.‌ ಅರ್ಥಗಾರಿಕೆಯನ್ನು ಅಸ್ವಾದಿಸುವಲ್ಲಿ ಇಂದು ಪಂಥಾಹ್ವಾನಗಳು ಇವೆ. ಯಕ್ಷಗಾನವನ್ನು, ತಾಳಮದ್ದಳೆಯನ್ನು ಆಸ್ವಾಧಿಸುವ ಬಗೆಯಲ್ಲಿ ವ್ಯಾತ್ಯಾಸಗಳಾಗುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾತನಾಡಿ, ತುಳುನಾಡಿನಲ್ಲಿ ಎಲ್ಲಾ ಭಾಷಿಗರು ಇದ್ದರೂ ಯಕ್ಷಗಾನಕ್ಕೆ ಬರುವಾಗ ಶುದ್ದ ಕನ್ನಡದಲ್ಲೇ ಮಾತನಾಡುವುದು ಇಲ್ಲಿಯ ವಿಶೇಷ.ತುಳುವರು ಜ್ಞಾನವನ್ನು ಎಂದಿಗೂ ಕೂಡಿಡದೆ ಪಾರ್ದನ, ಯಕ್ಷಗಾನ ಮೊದಲಾದ ಕಲಾಪ್ರಕಾರಗಳ ಮೂಲಕ ಸಮಾಜಕ್ಕೆ ಅರ್ಪಸಿದವರು.
ಯಕ್ಷಗಾನದಿಂದಲೇ ನಮ್ಮ ಜಿಲ್ಲೆ ಬುದ್ದಿವಂತರ ಜಿಲ್ಲೆ ಎಂದೆನಿಸಿಕೊಂಡಿದೆ ಎಂದರು.
ಯಕ್ಷಾಂಗಣದ ಗೌರವಾಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಯಕ್ಷಗಾನ ಕಲೆಯ ಉಳಿವಿಗಾಗಿ ಮತ್ತು ಬೆಳವಣಿಗಾಗಿ ಕಳೆದ ಹದಿನಾಲ್ಕು ವರ್ಷದಿಂದ ಈ ಕಾರ್ಯಕ್ರಮ ನಡೆಯುತ್ತಾ ಬಂದಿದ್ದು, ಯಕ್ಷಗಾನ ಕ್ಷೇತ್ರದ ಸಾಧನೆ ಮಾಡಿದ ಹಾಗೂ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವವರನ್ನು ಗೌರವಿಸುವ ಕಾರ್ಯವೂ ನಡೆಯುತ್ತಿದೆ ಎಂದರು.
ಬಜಪೆ ಬಂಟರ ಸಂಘದ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಥಾಣೆ ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವೆಲ್ಲ ಶೂನ್ಯದಿಂದ ಮೇಲೆ ಬಂದವರು. ದೈವ ಕೃಪೆಯಿಂದ ವ್ಯವಹಾರ ಕ್ಷೇತ್ರದಲ್ಲಿ ಒಂದಷ್ಟು ಸಾಧನೆ, ಸಂಪಾದನೆ ಹಾಗೂ ಜನಪ್ರೀತಿ ಗಳಿಸುವಂತಾಗಿದೆ. ಸಂಪಾದನೆಯ ಒಂದು ಭಾಗ ಸಮಾಜ ಮತ್ತು ಸಂಸ್ಕೃತಿಯ ಒಳಿತಿಗೆ ವಿನಿಯೋಗವಾಗುವುದರಲ್ಲಿ ಸಂತೃಪ್ತಿ ಇದೆ. ಇಂತಹ ಅಳಿಲ ಸೇವೆಯನ್ನು ಗುರುತಿಸಿ ಯಕ್ಷಾಂಗಣದಂತಹ ಪ್ರತಿಷ್ಠಿತ ಸಂಸ್ಥೆ ದೊಡ್ಡ ಮಟ್ಟದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದರಿಂದ ಧನ್ಯತೆ ತಂದಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಎ ಎಸ್.ಎಸ್. ನಾಯಕ್, ಥಾಣೆ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಎಂ. ಶೆಟ್ಟಿ, ವಿವಿ ಕಾಲೇಜಿನ ಪ್ರಾಂಶುಪಾಲ ಡಾ. ಜಯವಂತ ನಾಯಕ್ ಮಾತನಾಡಿದರು. ನಿಟ್ಟೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ, ಮಂಗಳೂರು ವಿವಿ ಯಕ್ಷಗಾನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ. ಸತೀಶ್ ಕೊಣಾಜೆ ಅತಿಥಿಗಳಾಗಿದ್ದರು.
ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಹರೇಕಳ ಅಭಿನಂದನಾ ಭಾಷಣ ಮಾಡಿದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಸುಧಾಕರ ರಾವ್ ಪೇಜಾವರ ವಂದಿಸಿದರು.ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಕಾರ್ಯದರ್ಶಿಗಳಾದ ಕೆ. ಲಕ್ಷ್ಮಿ ನಾರಾಯಣ ರೈ ಹರೇಕಳ, ಸುಮಾ ಪ್ರಸಾದ್; ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಜಗದೀಶ ಪೂಜಾರಿ ಇರಾ ಆಚೆಬೈಲು, ಸಿದ್ಧಾರ್ಥ ಅಜ್ರಿ, ವಾಸಪ್ಪ ಶೆಟ್ಟಿ ಉಪಸ್ಥಿತರಿದ್ದರು.

Exit mobile version