Site icon Ullalavani

ಪಂಪಾ ನದಿಗೆ ಬಟ್ಟೆ ಎಸೆದರೆ ಗರಿಷ್ಠ 5,000 ದಂಡ; ಶಬರಿಮಲೆ ಯಾತ್ರಾರ್ಥಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ

ತಿರುವನಂತಪುರಂ, ನ.23 : ಪವಿತ್ರ ಪಂಪಾ ನದಿಗೆ ಬಟ್ಟೆಗಳನ್ನ ಎಸೆಯುವುದು ಅಥವಾ ನದಿಯನ್ನು ಕಲುಷಿತಗೊಳಿಸುವುದು ಕಂಡುಬಂದರೆ ಇನ್ಮುಂದೆ ಗರಿಷ್ಠ 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.


ನದಿಯ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪಂಪಾ ನದಿಗೆ ಬಟ್ಟೆಯನ್ನು ಎಸೆಯದಂತೆ, ನದಿಯನ್ನು ಕಲುಷಿತಗೊಳಿಸದೆ ಪಾವಿತ್ರ‍್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವಂತೆ ಭಕ್ತರಲ್ಲಿ ಕೋರಲಾಗಿದೆ.
ಈ ಕುರಿತು ಕೇರಳ ಸಿಎಂ ವಿ.ಡಿ. ಸತೀಶನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಶಬರಿಮಲೆ ಹಾಗೂ ಪಂಪಾ ನದಿಯ ಸ್ವಚ್ಛತೆ ಕಾಪಾಡುವಂತೆ ಭಕ್ತರಿಗೆ ಮನವಿ ಮಾಡಿದ್ದಾರೆ. ಪವಿತ್ರ ನದಿಗೆ ಬಟ್ಟೆ, ಪ್ಲಾಸ್ಟಿಕ್ ಅಥವಾ ಯಾವುದೇ ರೀತಿಯ ತ್ಯಾಜ್ಯವನ್ನ ಎಸೆಯಬೇಡಿ. ಮುಂದಿನ ಪೀಳಿಗೆಗಳಿಗಾಗಿ ನದಿಯ ಪಾವಿತ್ರ‍್ಯ ಮತ್ತು ಸ್ವಚ್ಛತೆಯನ್ನ ಕಾಪಾಡೋಣ” ಎಂದು ಮನವಿ ಮಾಡಿದ್ದಾರೆ.ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ನಡೆಯುವ ‘ಮಕರವಿಳಕ್ಕು’ ಉತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಶಬರಿಮಲೆಗೆ ಆಗಮಿಸುತ್ತಾರೆ. ಈ ಯಾತ್ರೆಯ ಭಾಗವಾಗಿ ಪಂಪಾ ನದಿಯಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ. ಆದರೆ, ಸ್ನಾನದ ಬಳಿಕ ಅನೇಕ ಭಕ್ತರು ತಾವು ಧರಿಸಿದ್ದ ಒದ್ದೆ ಬಟ್ಟೆಗಳನ್ನ ನದಿಯಲ್ಲೇ ಬಿಟ್ಟು ತೆರಳುತ್ತಿರುವುದರಿಂದ ನದಿ ಕಲುಷಿತಗೊಳ್ಳುತ್ತಿದೆ.ಧಾರ್ಮಿಕ ಸಂಪ್ರದಾಯದ ಹೆಸರಿನಲ್ಲಿ ಪಂಪಾ ನದಿಯಲ್ಲಿ ಪ್ರತಿದಿನ ಹಲವು ಟನ್‌ಗಳಷ್ಟು ಬಟ್ಟೆಗಳನ್ನು ಎಸೆಯಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದ್ದು, ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಹೊಸ ಆದೇಶದಂತೆ ಪಂಪಾ ನದಿಗೆ ಬಟ್ಟೆ ಅಥವಾ ಇತರ ತ್ಯಾಜ್ಯಗಳನ್ನು ಎಸೆಯುವುದು ಹಾಗೂ ನದಿಯನ್ನು ಕಲುಷಿತಗೊಳಿಸುವುದು ಕಂಡುಬಂದಲ್ಲಿ ಸ್ಥಳದಲ್ಲೇ ಗರಿಷ್ಠ 5,000 ದಂಡ ವಿಧಿಸಲಾಗುತ್ತದೆ.ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್), 2023ರ ಸೆಕ್ಷನ್ 163 ಹಾಗೂ ಕೇರಳ ಪಂಚಾಯತ್ ರಾಜ್ ಕಾಯ್ದೆ, 1994ರ ಸೆಕ್ಷನ್ 219ಎನ್(1) ಮತ್ತು (3)ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ದಂಡದ ಮೊತ್ತವನ್ನು 15 ದಿನಗಳ ಒಳಗೆ ಪಾವತಿ ಮಾಡದಿದ್ದರೆ, ಕಾನೂನು ಕ್ರಮ ಕೂಡ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Exit mobile version