Site icon Ullalavani

ಪರಿಸರಕ್ಕೆ ಹಾನಿಯಾಗದಂತೆ ಉತ್ಸವಗಳು ನಡೆಯಲಿ: ಕೆ.ಎನ್. ಆಳ್ವ

ಉಳ್ಳಾಲ: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅರಣ್ಯ ಹಾಗೂ ಜೀವವೈವಿಧ್ಯ ಸಂರಕ್ಷಣೆಯ ಬಗ್ಗೆ ಅರಿವು ಹೊಂದುವುದು ಅತ್ಯಂತ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆಯುವ ಹಲವು ಉತ್ಸವಗಳಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದು, ಗಿಡಗಳನ್ನು ನೆಡುವುದು ಹಾಗೂ ಕಸ ವಿಂಗಡಣೆ ಮಾಡುವಂತಹ ಪರಿಸರ ಸ್ನೇಹಿ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಮೂಲಕ ಅರಿತುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಎನ್. ಆಳ್ವ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾವೂರು ಹರೇಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕೊಣಾಜೆ ಕ್ಲಸ್ಟರ್ ಮಟ್ಟದ ‘ಪ್ರತಿಭಾ ಕಾರಂಜಿ – ಚಿಣ್ಣರ ಸಂಭ್ರಮ 2026’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಸಂಸ್ಥೆಗಳ ಸಂಚಾಲಕ ಕಡೆಂಜ ಸೋಮಶೇಖರ ಚೌಟ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ನಾಥನಿಯಲ್ ಎಡ್ವರ್ಡ್ ಐಮನ್ ಮಾತನಾಡಿ, ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಸೂಕ್ತ ತರಬೇತಿ ನೀಡಿ ವೇದಿಕೆ ಕಲ್ಪಿಸುವ ಉತ್ತಮ ಅವಕಾಶವಾಗಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿವೃತ್ತ ಅಧ್ಯಕ್ಷ ರಾಧಾಕೃಷ್ಣ ರಾವ್, ನಿವೃತ್ತ ಮುಖ್ಯ ಶಿಕ್ಷಕಿ ಸೀತಾಲಕ್ಷ್ಮಿ, ನಿವೃತ್ತ ಶಿಕ್ಷಕರಾದ ಬಾಬು ಮಾಸ್ಟರ್, ಸುಗುಣ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಲಿಖಿತ್, ಕೋಶಾಧಿಕಾರಿ ಜಮಾಲುದ್ದೀನ್, ಪದಾಧಿಕಾರಿಗಳಾದ ಅಬ್ದುಲ್ ಬಶೀರ್, ರೆಹನ, ಅಬೂಸ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮೋಹಿನಿ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಹಕರಿಸಿದ ಕೆ.ಎನ್. ಆಳ್ವ, ನಾಥನಿಯಲ್ ಎಡ್ವರ್ಡ್ ಐಮನ್ ಹಾಗೂ ಸುಗುಣ ಅವರನ್ನು ಅಭಿನಂದಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ಪ್ರೇಮಲತಾ ಸ್ವಾಗತಿಸಿದರು. ಸಿಆರ್‌ಪಿ ವಿಲ್ಮಾ ಡಿಸೋಜ ಪ್ರಸ್ತಾವನೆಗೈದರು. ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಮ್ ಹರೇಕಳ ನಿರೂಪಿಸಿದರು. ಮುಖ್ಯ ಶಿಕ್ಷಕಿ ಮೋಹಿನಿ ವಂದಿಸಿದರು.

ಶಿಕ್ಷಕರಾದ ಉಷಾ, ನಾಗೇಂದ್ರ, ಕೃಷ್ಣ ಶಾಸ್ತ್ರಿ, ಶಿವಕುಮಾರ್, ಸ್ಮಿತಾ, ಭವ್ಯ, ಪ್ರಷ್ಮಾ, ರೇಖಾ, ದಿವ್ಯ, ಸುಜಾತ, ಮೋಹನ್ ಹಾಗೂ ರವೀಶ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Exit mobile version