Site icon Ullalavani

ಮಂಗಳೂರು ವಿವಿಯಲ್ಲಿ ಐದು ದಿನಗಳಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ

ಕೊಣಾಜೆ: ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದು ಸಮಾಜದ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುವ ಪ್ರಬಲ ಮಾಧ್ಯಮವಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಮಕ್ಕಳಲ್ಲಿ ದೃಶ್ಯ ಸಂಸ್ಕೃತಿಯ ನೈಜ ಅರಿವು ಮೂಡಿಸಿ ಸಮಾಜಮುಖಿಯಾಗಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.


ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರವು ಎಸ್.ವಿ.ಪಿ. ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲೀಷ್ ವಿಭಾಗದ ಸಹಯೋಗದೊಂದಿಗೆ ಐದು ದಿನಗಳ ಕಾಲ ನಡೆಯಲಿರುವ ಮಕ್ಕಳ ಚಲನಚಿತ್ರೋತ್ಸವವನ್ನು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲರೂ ಅರಿವಿನ ಹಣತೆಯಾಗಬೇಕು. ಸಾಂಸ್ಕೃತಿಕ ಜಗತ್ತನ್ನು ಎಚ್ಚರವಾಗಿಟ್ಟುಕೊಂಡಾಗ ಸಮಾಜಮುಖಿಯಾಗಿ ಬದುಕಲು ಸಾಧ್ಯ. ಇಂದಿನ ಮಕ್ಕಳಿಗೆ ಸಿನಿಮಾ ಎಂದರೇನು, ಅದರ ಹಿಂದಿರುವ ದೃಶ್ಯ ಸಾಧ್ಯತೆಗಳೇನು ಎಂಬುದನ್ನು ಪರಿಚಯಿಸುವ ಅಗತ್ಯವಿದೆ. ಹಿಂದಿನ ಕಾಲದಲ್ಲಿ ಯಾವುದೇ ವಿಷಯವನ್ನು ತಿಳಿದುಕೊಳ್ಳಲು ಸಾಕಷ್ಟು ಓದು ಮತ್ತು ಪರಿಶ್ರಮ ಅಗತ್ಯವಿತ್ತು. ಆದರೆ ಇಂದು ಗೂಗಲ್ ಮೂಲಕ ಕ್ಷಣಾರ್ಧದಲ್ಲಿ ಮಾಹಿತಿ ಪಡೆಯಬಹುದಾಗಿದೆ. ಇದರಿಂದ ಮನುಷ್ಯನ ಮೆದುಳಿಗೆ ಕೆಲಸ ಕಡಿಮೆಯಾಗಿ ಪರಾವಲಂಬಿಯಾಗಿದ್ದೇವೆ. ಮೊಬೈಲ್ ತಂತ್ರಜ್ಞಾನ ಅದ್ಭುತ ಆವಿಷ್ಕಾರವಾದರೂ ಅದರ ಅತಿಯಾದ ಅವಲಂಬನೆ ಸ್ವತಂತ್ರ ಚಿಂತನಾ ಸಾಮರ್ಥ್ಯವನ್ನು ಕುಂಠಿತಗೊಳಿಸಬಹುದು. ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೇ ಹೊರತು ಅದಕ್ಕೆ ಸಂಪೂರ್ಣವಾಗಿ ಅವಲಂಬಿತರಾಗಬಾರದು. ಮೊಬೈಲ್ ಬಳಕೆ ಮತ್ತು ಅಂತರ್ಜಾಲದ ಪ್ರಭಾವ ಮಕ್ಕಳ ಮನೋವಿಕಾಸದ ಮೇಲೂ ಪರಿಣಾಮ ಬೀರುತ್ತಿದೆ ಎಂದರು.

ಕಥಾ ಪ್ರಪಂಚದಿಂದ ಅಕ್ಷರ ಪ್ರಪಂಚಕ್ಕೆ, ಅಲ್ಲಿಂದ ದೃಶ್ಯ ಪ್ರಪಂಚಕ್ಕೆ ಸಾಗುವ ಪ್ರಕ್ರಿಯೆ ನಡೆಯಬೇಕು. ಮಕ್ಕಳ ಸಿನಿಮಾ ನಿರ್ಮಿಸುವ ಮೊದಲು ಸಾಹಿತ್ಯ ಮತ್ತು ಓದುವ ಸಂಸ್ಕೃತಿಯೊಂದಿಗೆ ಮಕ್ಕಳು ಬೆರೆಯುವಂತಾಗಬೇಕು. ಮಾಹಿತಿಯನ್ನು ಜ್ಞಾನವಾಗಿ ಪರಿವರ್ತಿಸಿಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಜನೆಯೊಂದಿಗೆ ಕುತೂಹಲ, ಅರಿವು ಮತ್ತು ಸೃಜನಶೀಲತೆಗೂ ಆದ್ಯತೆ ನೀಡಬೇಕು ಎಂದರು.
ಪ್ರತಿಯೊಬ್ಬರಿಗೂ ವೃತ್ತಿಯ ಜೊತೆಗೆ ಪ್ರವೃತ್ತಿಯೂ ಇರಬೇಕು. ಪ್ರವೃತ್ತಿ ಮನುಷ್ಯನ ಹೃದಯವನ್ನು ಅರಳಿಸಿ ಬದುಕಿನ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಇಂದು ಸಂಬಂಧಗಳ ನಡುವೆ ಆತ್ಮೀಯತೆಯ ಕೊರತೆ ಕಾಣುತ್ತಿದೆ. ಕೃತಕ ಆತ್ಮೀಯತೆಯ ಮಾತುಗಳಿಗಿಂತ ಹೃದಯಪೂರ್ವಕ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯದ ಕುಲಸಚಿವ ಸಂತೋಷ್ ಬಿ. ಜಗಲಸಾರ, ಮಕ್ಕಳ ಆಸೆಗಳು ಚಿಕ್ಕದಾಗಿದ್ದರೂ ಅವರ ಸಂತೋಷ ದೊಡ್ಡದಾಗಿರುತ್ತದೆ. ಇದು ಮಕ್ಕಳ ಸಹಜ ಗುಣ. ಪ್ರತಿಯೊಂದು ಮಗುವಿನಲ್ಲಿಯೂ ವಿಭಿನ್ನ ಪ್ರತಿಭೆ ಮತ್ತು ಸಾಮರ್ಥ್ಯವಿರುತ್ತದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಸುಲಭದ ಕೆಲಸವಲ್ಲ. ಕಲ್ಲಿನಂತಿರುವ ವ್ಯಕ್ತಿತ್ವವನ್ನು ಶಿಲ್ಪವನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮಕ್ಕಳ ಕನಸುಗಳು, ಬೆಳವಣಿಗೆ ಮತ್ತು ವ್ಯಕ್ತಿತ್ವ ರೂಪಿಸುವ ಪ್ರಕ್ರಿಯೆಯನ್ನು ಚಲನಚಿತ್ರಗಳ ಮೂಲಕ ಪರಿಣಾಮಕಾರಿಯಾಗಿ ತೋರಿಸಿಕೊಡಲು ಸಾಧ್ಯ ಎಂದರು.
ಆಂಗ್ಲ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಪರಿಣಿತ ಉಪಸ್ಥಿತರಿದ್ದರು.
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಯಶು ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನೆಹರು ಚಿಂತನ ಕೇಂದ್ರದ ನಿರ್ದೇಶಕ ಪ್ರೊ. ಪ್ರಶಾಂತ್ ನಾಯಕ್ ವಂದಿಸಿದರು.

Exit mobile version