Site icon Ullalavani

ಮಳೆ ಕೊರತೆ: ಉಳ್ಳಾಲ ತಾಲೂಕು ಸಾಧಾರಣ ಬರಪೀಡಿತವೆಂದು ಘೋಷಣೆ: ಜಾನುವಾರುಗಳಿಗೆ 8 ತಿಂಗಳ ಮೇವು ಸಂಗ್ರಹಿಸಲು ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವ ನಿಟ್ಟಿನಲ್ಲಿ ಉಳ್ಳಾಲ ತಾಲೂಕನ್ನು ಸಾಧಾರಣ ಬರಪೀಡಿತ ತಾಲೂಕೆಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಯಿದ್ದು, ರೈತರು ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ 6-7 ತಿಂಗಳಿಗೆ ಸಾಕಾಗುವಷ್ಟು ಮೇವನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಜಲಮೂಲಗಳ ಸಂಗ್ರಹಣೆಯ ಪ್ರಮಾಣ ಕುಸಿದಿರುವುದರಿಂದ ಮುಂದಿನ ದಿನಗಳಲ್ಲಿ ಒಣ ಮೇವಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಭತ್ತದ ಫಸಲು ಕಟಾವು ಆರಂಭವಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಮುಂದಿನ ಮಳೆಗಾಲ ಆರಂಭವಾಗುವವರೆಗೆ ಸಾಕಾಗುವಷ್ಟು ಮೇವನ್ನು ಸಂಗ್ರಹಿಸಿಕೊಳ್ಳಬೇಕು. ಜಿಲ್ಲೆಯ ಹುಲ್ಲನ್ನು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಮಾರಾಟ ಮಾಡದಂತೆಯೂ ಇಲಾಖೆ ಮನವಿ ಮಾಡಿದೆ. ಅಲ್ಲದೆ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋಶಾಲೆಗಳು ತಮ್ಮಲ್ಲಿರುವ ಜಾನುವಾರುಗಳಿಗೆ ಮುಂದಿನ 6-7 ತಿಂಗಳಿಗೆ ಅಗತ್ಯವಿರುವಷ್ಟು ಮೇವಿನ ಸಂಗ್ರಹಣೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ರೈತರಿಗೆ ಉಚಿತವಾಗಿ ಮೇವು ಬೀಜದ ಕಿರು ಪೊಟ್ಟಣ ವಿತರಣೆ

ಮಳೆಯ ಕೊರತೆಯಿಂದ ಜಾನುವಾರುಗಳಿಗೆ ಮೇವು ಒದಗಿಸಲು ತೊಂದರೆ ಅನುಭವಿಸುತ್ತಿರುವ ರೈತರ ಅನುಕೂಲಕ್ಕಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಉಚಿತವಾಗಿ ಮೇವು ಬೀಜದ ಕಿರು ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಉಳ್ಳಾಲ ತಾಲೂಕಿನ ವಿವಿಧ ಪಶುವೈದ್ಯಕೀಯ ಸಂಸ್ಥೆಗಳ ಮೂಲಕ ರೈತರಿಗೆ ಬಹು ಕಟಾವಿನ ಮೇವು ಜೋಳ ಹಾಗೂ ಏಕಕಟಾವಿನ ಮೆಕ್ಕೆಜೋಳದ ಬೀಜಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಇಲಾಖೆಯಲ್ಲಿ ಹೈಬ್ರಿಡ್ ಫಾಡರ್ ಸೋರ್ಗಮ್ ಮಲ್ಟಿಕಟ್ (5 ಕೆ.ಜಿ.) ಹಾಗೂ ಆಫ್ರಿಕನ್ ಟಾಲ್ ಮೆಕ್ಕೆಜೋಳ (6 ಕೆ.ಜಿ.)ಮೇವು ಬೀಜದ ಪೊಟ್ಟಣಗಳು ಲಭ್ಯವಿವೆ.

ಅಗತ್ಯ ದಾಖಲೆಗಳು:

 ರೈತರು ಜಾನುವಾರುಗಳನ್ನು ಹೊಂದಿರಬೇಕು.

ಆಧಾರ್ ಕಾರ್ಡ್ ಪ್ರತಿ.

ರೈತರ ನೋಂದಣಿ ಸಂಖ್ಯೆ.

ಆರ್‌ಟಿಸಿ ಪ್ರತಿ.

ಮೇವು ಬೀಜದ ಕಿರು ಪೊಟ್ಟಣಗಳನ್ನು ಪಡೆಯಲು ಆಸಕ್ತ ರೈತರು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುವೈದ್ಯಕೀಯ ಸಂಸ್ಥೆ ಅಥವಾ ಗ್ರಾಮದ ಪಶುಸಖಿಯರನ್ನು ಸಂಪರ್ಕಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಕಟಣೆ ತಿಳಿಸಿದೆ.

Exit mobile version