Site icon Ullalavani

ಶಿವಗಿರಿ ಮಠದಲ್ಲಿ ಫೆ. 2ರಂದು ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿಯವರ ಜನ್ಮದಿನಾಚರಣೆ

ಮಂಗಳೂರು: ಮಾಡೂರು ಮರಿಯಣ್ಣಪಾಲು ಕೊಂಡಾಣದ ಶ್ರೀ ಶಿವದುರ್ಗಾಂಭ ಮಠ ಶಿವಗಿರಿಯಲ್ಲಿ ಪರಮಪೂಜ್ಯ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಫೆಬ್ರವರಿ 2ರಂದು ವಿವಿಧ ಧಾರ್ಮಿಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 6.30ಕ್ಕೆ ಮಹಾಗಣಪತಿ ಯಾಗದೊಂದಿಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ರುದ್ರಾಭಿಷೇಕ ಹಾಗೂ ಬಳಿಕ ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಆರೋಗ್ಯವರ್ಧನೆಗಾಗಿ ಸಂಕಲ್ಪದೊಂದಿಗೆ ಮಹಾ ಧನ್ವಂತರಿ ಯಾಗ ನೆರವೇರಲಿದೆ.

ಮಧ್ಯಾಹ್ನ 12 ಗಂಟೆಗೆ ಶ್ರೀ ಗುರು ಪಾದುಕಾ ಸೇವೆ ಹಾಗೂ 12.30ಕ್ಕೆ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ಮಾಡಲಾಗುವುದು. ಬಳಿಕ ದೀಪಾರಾಧನೆ, ಶ್ರೀ ಶನೀಶ್ವರ ಪೂಜೆ ಮತ್ತು ಪೂಜ್ಯ ಚಿನ್ಮಯ ದಾಸ ವಿರಚಿತ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರುಗಲಿದೆ.

ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ, ಮಹಾಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ದಿನವಿಡೀ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಸಮಾಪನಗೊಳ್ಳಲಿವೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದು ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಶ್ರೀ ಶಿವದುರ್ಗಾಂಭ ಮಠ ಶಿವಗಿರಿಯ ಆಡಳಿತ ಮಂಡಳಿ ಹಾಗೂ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Exit mobile version