ಉಳ್ಳಾಲ: ಸಾಯಿ ಪರಿವಾರ ಟ್ರಸ್ಟ್ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಳಿಸಿದೆ. ಬಡವರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಮದುವೆ ಹಾಗೂ ಮನೆ ನಿರ್ಮಾಣಕ್ಕೆ ನೆರವು ನೀಡುತ್ತಿರುವ ಟ್ರಸ್ಟ್ನ ಸೇವೆ ನಿಜಕ್ಕೂ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳು ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂದು ಸಾಯಿ ಪರಿವಾರ್ ಟ್ರಸ್ಟ್ ನ ಮಹಾಪೋಷಕ , ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.
ಅವರು ಕೊಲ್ಯ ದ್ವಾರಕಾನಗರದ ಸೌಂದರ್ಯ ವಿಲ್ಲಾ ದಲ್ಲಿ ಭಾನುವಾರ ಜರಗಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸಾಯಿ ಪರಿವಾರ ಟ್ರಸ್ಟ್ನ ತುಳುವೆರೆ ತುಡರ್ ಪರ್ಬದ ಪ್ರಯುಕ್ತ ಸಾಯಿ ಪರಿವಾರ್ ಸೇವಕರ ಗೊಂಚಿಲ್ 2026 ದೀಪಾವಳಿ ಕುಟುಂಬ ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
33 ವರ್ಷಗಳ ಹಿಂದೆ ಹೊಸ ಹೊಸ ಜನರ ಪರಿಚಯವಾಗಬೇಕು, ಸಮಾಜದಲ್ಲಿ ಉತ್ತಮ ಸಂಬಂಧಗಳನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರಯಾಣ ಆರಂಭವಾಗಿತ್ತು. ಪರಸ್ಪರ ವಿಶ್ವಾಸವನ್ನೇ ಬಂಡವಾಳವಾಗಿಸಿಕೊಂಡು ಈವರೆಗೆ ಬೆಳೆದು ಬಂದಿದ್ದೇವೆ. ಪ್ರಯಾಣದಲ್ಲಿ ಸಾಯಿ ಪರಿವಾರ್ ಟ್ರಸ್ಟ್ ನ ಸಮಾಜ ಸೇವೆಗಳಲ್ಲಿ ಒಂದಾಗುವ ಅವಕಾಶವೂ ದೊರೆತಿದೆ. ಜನರು ಇಟ್ಟಿರುವ ನಂಬಿಕೆ ಮತ್ತು ಪ್ರೀತಿಯೇ ನಮ್ಮ ಬೆಳವಣಿಗೆಗೆ ಪ್ರಮುಖ ಕಾರಣ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಯಿ ಪರಿವಾರ್ ಟ್ರಸ್ಟಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸುವ ಕೆಲಸಗಳಾಗಲಿ ಎಂದರು
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಮದುವೆ ಹಾಗೂ ಮನೆ ನಿರ್ಮಾಣದಂತಹ ಜೀವನದ ಪ್ರಮುಖ ಸಂದರ್ಭಗಳಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಹಕಾರ ನೀಡುತ್ತಿರುವ ಸಾಯಿ ಪರಿವಾರ ಟ್ರಸ್ಟ್ನ ಸೇವೆ ಅದ್ಭುತವಾದುದು. ಸಮಾಜದ ಅಗತ್ಯಗಳಿಗೆ ಸ್ಪಂದಿಸುತ್ತಾ ನಿರಂತರವಾಗಿ ಜನಪರ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಸಾಯಿ ಪರಿವಾರ ಟ್ರಸ್ಟ್, ತನ್ನ ಸೇವಾ ಚಟುವಟಿಕೆಗಳ ಮೂಲಕ ಜನರ ವಿಶ್ವಾಸ ಗಳಿಸಿದೆ. ಇಂತಹ ಸಮಾಜಮುಖಿ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕ ನಂತರದ ಬೆಳವಣಿಗೆಗಳು ಬಹಳಷ್ಟು ನಡೆದಿದೆ. ಮುಂದೆಯೂ ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಟ್ರಸ್ಟ್ ಮುಂದುವರಿಯಲಿ ಎಂದು ಆಶಿಸಿದರು.
ಉಳ್ಳಾಲ ಚೀರಂಭ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ್ ಕಾರ್ಯಕ್ರಮ ಉದ್ಘಾಟಿಸಿದರು.
ಅನ್ವಿತ್ ಎಲೆಕ್ಟ್ರಾನಿಕ್ಸ್ ಮಾಲೀಕ ಪ್ರಕಾಶ್, ಭಾರತೀಯ ತೀಯ ಸಮಾಜದ ಉಳ್ಳಾಲ ಅಧ್ಯಕ್ಷ ಜಯಂತ್ ಕೊಂಡಾಣ, ಉದ್ಯಮಿ ಕಿಶೋರ್ ಮಂಚಿ, ಸುಧಾಕರ್, ಮಟನ್ ರಾಜಾ ತೊಕ್ಕೊಟ್ಟು, ಬಿಜೆಪಿ ಮಂಗಳೂರು ಕ್ಷೇತ್ರ ಮಹಿಳಾ ಮೋರ್ಛಾ ಅಧ್ಯಕ್ಷೆ ಮಾಧವಿ ಉಳ್ಳಾಲ, ಧನಲಕ್ಷ್ಮೀ ಗಟ್ಟಿ , ಪ್ರ.ಕಾ ಸುಮಲತಾ ಕೊಣಾಜೆ, ಟ್ರಸ್ಟಿಗಳಾದ ಗೀತೇಶ್ ಕುತ್ತಾರ್, ಗಣೇಶ್ ಅಂಚನ್, ಪುರುಷೋತ್ತಮ್ ಕಲ್ಲಾಪು, ರಘುನಾಥ್ ಕುಲಾಲ್, ಧೀರಜ್ ಗಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ್ ಪಂಡಿತ್ ಉಪಸ್ಥಿತರಿದ್ದರು.
ಅಂದದ ಶಾರದೆ ಫೋಟೊ ಸ್ಪರ್ಧೆಯಲ್ಲಿ ಪುತ್ತೂರಿನ ಲಾವಣ್ಯ ಕೆ. ನಾಯಕ್ ಅವರು ಪ್ರಶಸ್ತಿ ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ಕಿನ್ನಿಗೋಳಿಯ ಇಶಾನಿ ಸಿ. ದೇವಾಡಿಗ ಹಾಗೂ ತೃತೀಯ ಬಹುಮಾನವನ್ನು ಮಾಡೂರಿನ ಸಮೃದ್ಧಿ ಆರ್. ಬಂಗೇರ ಅವರು ತಮ್ಮದಾಗಿಸಿಕೊಂಡರು.
ಕಾರ್ಯಕ್ರಮದಲ್ಲಿ ೨೫ ನೇ ವಿವಾಹ ವಾರ್ಷಿಕೋತ್ಸವ ಪೂರೈಸಿದ ಸರಿತಾ–ಚಂದ್ರಹಾಸ್ ಪಂಡಿತ್ ಹೌಸ್ ದಂಪತಿಯನ್ನು ವಿಶೇಷವಾಗಿ ಅಭಿನಂದಿಸಿ ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ದಂಪತಿಯನ್ನು ಸನ್ಮಾನಿಸಲಾಯಿತು.
ಕಾವ್ಯ ಎಸ್.ಸುವರ್ಣ ನಿರೂಪಿಸಿದರು. ಸ್ವಾಗತ ಪ್ರವೀಣ್ ಎಸ್. ಕುಂಪಲ, ರಜನೀಶ್ ನಾಯಕ್ ಪಂಡಿತ್ ಹೌಸ್ ವಂದಿಸಿದರು
ಸಾಯಿ ಪರಿವಾರ್ ಟ್ರಸ್ಟ್ ಸೇವಾ ಭಾಗದ ಹಿನ್ನೆಲೆಯಲ್ಲಿ ಪ್ರವೀಣ್ ಶೆಟ್ಟಿ ಮೇಗಿನ ಮನೆ ಇವರ ಆಶಯದಂತೆ ಕುಂಪಲದ ಅಶಕ್ತ ೆರಡು ಕುಟುಂಬಗಳಿಗೆ ವಿವಾಹ ವೆಚ್ಛಕ್ಕೆ ಸಹಾಯಧನ ಹಾಗೂ ಮನೆ ನಿರ್ಮಾಣಕ್ಕೆ ಸಹಾಯಧನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಯಿ ಕಲಾವಿದರಿಂದ ನೃತ್ಯ, ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ, ಆಟ ಹಾಗೂ ಸಾಯಿ ಪರಿವಾರ್ ಸೇವಕ ಕುಟುಂಬದಿಂದ ಸಾಮೂಹಿಕ ಭೋಜನ ಮತ್ತು ದೀಪಾವಳಿ ಆಚರಣೆ ನಡೆಯಿತು.