Site icon Ullalavani

ಸೋಮೇಶ್ವರದಲ್ಲಿ ಜಿಲ್ಲಾ ಮಟ್ಟದ ಯೋಗ ಶಿಕ್ಷಣ ಪ್ರಶಿಕ್ಷಣ ಶಿಬಿರಕ್ಕೆ ಚಾಲನೆ

ಉಳ್ಳಾಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.), ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಜಿಲ್ಲಾ ಮಟ್ಟದ ಪ್ರಶಿಕ್ಷಣ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ನ.12ರಂದು ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ನಡೆಯಿತು.

ಸಾಮಾನ್ಯ ಹಾಗೂ ಹಿರಿಯರ ವಿಭಾಗಗಳಲ್ಲಿ ಪ್ರಶಿಕ್ಷಣ ಶಿಬಿರ ಆಯೋಜಿಸಲಾಗಿದ್ದು, ಸಾಮಾನ್ಯ ವಿಭಾಗದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಪಿವೈಎಸ್‌ಎಸ್‌ನ ನೇತ್ರಾವತಿ ವಲಯ ಸಂಚಾಲಕ ಅಶೋಕ ಜೈನ್ ವಹಿಸಿದ್ದರು. ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್, ಸೋಮನಾಥ ದೇವಸ್ಥಾನದ ಟ್ರಸ್ಟಿ ಭಾಸ್ಕರ ಗಟ್ಟಿ, ಪ್ರಾಂತ ಚಿಂತನ ಕೂಟ ಮತ್ತು ಸಂಪರ್ಕ ಪ್ರಮುಖ ಮಧುಮೂರ್ತಿ ಹಾಗೂ ಉಳ್ಳಾಲ ಚಿರುಂಬ ಭಗವತಿ ಮಹಿಳಾ ವೇದಿಕೆಯ ಅಧ್ಯಕ್ಷೆ ಮಾಧವಿ ಉಳ್ಳಾಲ್ ಅವರು ದೀಪ ಪ್ರಜ್ವಲಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಗಣ್ಯರು, ಯೋಗ ಶಿಕ್ಷಣದ ಮಹತ್ವವನ್ನು ತಿಳಿಸಿ ಶಿಬಿರಕ್ಕೆ ಶುಭ ಹಾರೈಸಿದರು.

ಹಿರಿಯರ ವಿಭಾಗದ ಉದ್ಘಾಟನೆಯನ್ನು ಸೋಮನಾಥ ದೇವಸ್ಥಾನದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ ಅವರು ದೀಪ ಪ್ರಜ್ವಲಿಸುವ ಮೂಲಕ ನೆರವೇರಿಸಿದರು. ಸೋಮನಾಥ ದೇವರ ಸಾನಿಧ್ಯದಲ್ಲಿ ನಡೆಯುತ್ತಿರುವ ಯೋಗ ಶಿಕ್ಷಣ ತರಬೇತಿ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದು ಹಾರೈಸಿದರು. ಜಿಲ್ಲಾ ಲೆಕ್ಕಪತ್ರ ಪ್ರಮುಖ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಗರಿಕರ ಶಿಕ್ಷಣ ಪ್ರಮುಖ ಜಯಪ್ರಕಾಶ್ ಅವರು ಯೋಗ ಶಿಕ್ಷಣದ ಮಹತ್ವದ ಕುರಿತು ಮಾತನಾಡಿದರು. ಉದ್ಯಮಿ ಮಧುಸೂದನ್ ಅಯ್ಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಶಿಕ್ಷಣಾರ್ಥಿಗಳು, ಶಿಕ್ಷಕರು, ಪ್ರಬಂಧಕರು ಹಾಗೂ ಯೋಗ ಬಂಧುಗಳು ಸೇರಿದಂತೆ ಸುಮಾರು 500 ಮಂದಿ ಉಪಸ್ಥಿತರಿದ್ದರು. ಸಾಮಾನ್ಯ ವಿಭಾಗದ ಕಾರ್ಯಕ್ರಮವನ್ನು ಶ್ರೀಮತಿ ಲತಾ ಹಾಗೂ ಹಿರಿಯರ ವಿಭಾಗದ ಕಾರ್ಯಕ್ರಮವನ್ನು ಶ್ರೀಮತಿ ಜ್ಯೋತಿ ನಿರೂಪಿಸಿದರು.

ಶಿಬಿರದ ಅಂಗವಾಗಿ ಶುಕ್ರವಾರ ಮಾತೃ ವಂದನ ಮತ್ತು ಮಾತೃ ಪೂಜನ, ಶನಿವಾರ ಯೋಗ ನಡಿಗೆ ಹಾಗೂ ಭಾನುವಾರ ಸಮಾರೋಪ ಸಮಾರಂಭ ನಡೆಯಲಿದೆ.

Exit mobile version