ಬಂಟ್ವಾಳ, ನ.12 : ಬಂಟ್ವಾಳ ತಾಲೂಕಿನ ಗ್ರಾಮಸ್ಥರ ತುರ್ತು ಆರೋಗ್ಯ ಅಗತ್ಯಗಳಿಗಾಗಿ ಆಟೋರಿಕ್ಷಾ ಚಾಲಕರ ಗುಂಪೊಂದು ಒಗ್ಗೂಡಿ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಿದೆ. ಪೊಳಲಿ ಸಮೀಪದ ಕರಿಯಂಗಳ ಗ್ರಾಮದ ಬಡಕಬೈಲಿನ ನವೋದಯ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಈ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.
ಬಡಕಬೈಲಿನಲ್ಲಿ ಸುಮಾರು 26 ಆಟೋರಿಕ್ಷಾಗಳಿವೆ. ಆಟೋರಿಕ್ಷಾ ನಿಲ್ದಾಣದ ಸಮೀಪವೇ ಆಂಬ್ಯುಲೆನ್ಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಆಟೋರಿಕ್ಷಾ ಚಾಲಕರೇ ಸ್ವತಃ ಆಂಬ್ಯುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸಲಿದ್ದಾರೆ. ಕರಿಯಂಗಳ ಮತ್ತು ಅಮ್ಮುಂಜೆ ಗ್ರಾಮದ ನಿವಾಸಿಗಳಿಗೆ ಈ ಸೇವೆಯ ಪ್ರಯೋಜನ ದೊರೆಯಲಿದೆ.
ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ವಾಹನವನ್ನು ಖರೀದಿಸಲಾಗಿದ್ದು, ಮೈಸೂರಿನಲ್ಲಿ ಸುಮಾರು 2 ಲಕ್ಷ ರೂಪಾಯಿ ಹೆಚ್ಚುವರಿ ವೆಚ್ಚದಲ್ಲಿ ಆಂಬ್ಯುಲೆನ್ಸ್ಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರಿಂದ ಸಂಗ್ರಹಿಸಲಾದ ಸಣ್ಣ ಪ್ರಮಾಣದ ದೈನಂದಿನ ಉಳಿತಾಯದ ಹಣದಿಂದ ಈ ಸಂಪೂರ್ಣ ಮೊತ್ತವನ್ನು ಕ್ರೋಢೀಕರಿಸಲಾಗಿದೆ. ಗ್ರಾಮಸ್ಥರು ಮತ್ತು ದಾನಿಗಳು ಕೂಡ ವಿಶೇಷ ಆರ್ಥಿಕ ನೆರವು ನೀಡಿದ್ದಾರೆ.ತುರ್ತು ವೈದ್ಯಕೀಯ ಸೇವೆಗಳಿಗಾಗಿ ಗ್ರಾಮಸ್ಥರನ್ನು ತಮ್ಮ ಆಟೋರಿಕ್ಷಾಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಚಾಲಕರು ಹಲವಾರು ತೊಂದರೆಗಳನ್ನು ಎದುರಿಸಿದ್ದರು. ಇದರಿಂದ ಪ್ರೇರಿತರಾದ ಅವರು, ಈ ಭಾಗಕ್ಕೆ ಆಂಬ್ಯುಲೆನ್ಸ್ ಸೇವೆಯ ಅತ್ಯಗತ್ಯವಿದೆ ಎಂದು ನಿರ್ಧರಿಸಿದ್ದರು.ಬಡವರು ಮತ್ತು ನಿರ್ಗತಿಕರಿಗೆ ನೆರವಾಗಲು ಪ್ರತಿ ತಿಂಗಳು ಪ್ರತಿ ಆಟೋರಿಕ್ಷಾ ಚಾಲಕರಿಂದ 100 ರೂಪಾಯಿ ಸಂಗ್ರಹಿಸಲಾಗುತ್ತದೆ. ಚಾಲಕರು ಮತ್ತು ಮಾಲೀಕರು ಒಟ್ಟಾಗಿ ವಿವಿಧ ಸಮಾಜಮುಖಿ ಕಾರ್ಯಗಳಿಗಾಗಿ 4 ಲಕ್ಷ ರೂಪಾಯಿಗೂ ಅಧಿಕ ನಿಧಿಯನ್ನು ಸಂಗ್ರಹಿಸಿದ್ದಾರೆ.ಈ ಭಾಗದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಅಥವಾ ವೈದ್ಯಕೀಯ ಅಗತ್ಯ ಎದುರಾದಾಗ ತಕ್ಷಣಕ್ಕೆ ಆಂಬ್ಯುಲೆನ್ಸ್ ಸೇವೆ ಲಭ್ಯವಿರುತ್ತಿರಲಿಲ್ಲ. ಹಲವು ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಗಾಗಿ ಗ್ರಾಮಸ್ಥರನ್ನು ಆಟೋರಿಕ್ಷಾಗಳಲ್ಲೇ ಆಸ್ಪತ್ರೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಇತ್ತು. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರು ಒಂದಾಗಿ, ದಾನಿಗಳ ಸಹಕಾರದೊಂದಿಗೆ ಆಂಬ್ಯುಲೆನ್ಸ್ ಖರೀದಿಸಿ ಗ್ರಾಮಸ್ಥರ ಸೇವೆಗೆ ಸಮರ್ಪಿಸಿದ್ದಾರೆ.