Site icon Ullalavani

ಜೋಡುಕಲ್ಲಿನಲ್ಲಿ ಗಣೇಶೋತ್ಸವದ ಚಪ್ಪರ ತೆರವು ವಿವಾದ: 35 ವರ್ಷಗಳ ಪರಂಪರೆ ಉಳಿಸಲು ಭಕ್ತರ ಹೋರಾಟ

ಕಾಸರಗೋಡು: ಮಂಜೇಶ್ವರ ತಾಲೂಕಿನ ಜೋಡುಕಲ್ಲಿನಲ್ಲಿ 35 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಗಣೇಶೋತ್ಸವದ ಧಾರ್ಮಿಕ ಪರಂಪರೆಗೆ ಅಡ್ಡಿಯಾಗಿರುವ ಚಪ್ಪರ ತೆರವು ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿರುವ ಚಪ್ಪರ ತೆರವುಗೊಳಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ ಎನ್ನಲಾಗಿದ್ದು, ಇದನ್ನು ವಿರೋಧಿಸಿ ಭಕ್ತರು ಹಾಗೂ ಹಿಂದೂ ಸಂಘಟನೆಗಳು ಹೋರಾಟಕ್ಕಿಳಿದಿವೆ.

ಜೋಡುಕಲ್ಲಿನಲ್ಲಿ ಪ್ರತಿವರ್ಷ ಗಣೇಶೋತ್ಸವ, ಅಷ್ಟಮಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಚಪ್ಪರ ನಿರ್ಮಿಸಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಚಪ್ಪರ ನಿರ್ಮಿಸಿರುವ ಜಾಗ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ಅಲ್ಲಿ ಅನಧಿಕೃತವಾಗಿ ಚಪ್ಪರ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಲೀಗ್ ಮುಖಂಡರೊಬ್ಬರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಾಗ ತೆರವುಗೊಳಿಸುವಂತೆ ಸೂಚನೆ ನೀಡಿದೆ ಎನ್ನಲಾಗಿದ್ದು, ಇದರ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಆದರೆ, ಮೂರುವರೆ ದಶಕಗಳಿಂದ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಆಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಪಟ್ಟು ಹಿಡಿದಿರುವ ಭಕ್ತರು ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ 14 ದಿನಗಳಿಂದ ಗಣೇಶನ ಸನ್ನಿಧಿಯಲ್ಲೇ ಭಜನೆ, ಹೋಮ ಸೇರಿದಂತೆ ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪ್ರತಿಭಟನೆ ಮುಂದುವರಿಸಿದ್ದಾರೆ. ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾದಾಗಲೆಲ್ಲ ಭಕ್ತರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಕಾರ್ಯಾಚರಣೆ ನಡೆಸಲಾಗದೆ ಅಧಿಕಾರಿಗಳು ಹಿಂದಿರುಗುವಂತಾಗಿದೆ.

ಜೋಡುಕಲ್ಲಿನ ಈ ವಿವಾದ ಇದೀಗ ಕಾಸರಗೋಡಿನ ಗಡಿ ಮೀರಿ ಕರ್ನಾಟಕ ಕರಾವಳಿಯಲ್ಲೂ ರಾಜಕೀಯ ಮತ್ತು ಧಾರ್ಮಿಕ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕ ಸಿ.ಟಿ. ರವಿ, ಪ್ರತಾಪ್ ಸಿಂಹ ಹಾಗೂ ಶಾಸಕ ಭರತ್ ಶೆಟ್ಟಿ ಸೇರಿದಂತೆ ಹಲವು ನಾಯಕರು ಈ ಬೆಳವಣಿಗೆಯ ಬಗ್ಗೆ ಗಮನ ಹರಿಸಿದ್ದಾರೆ. ಇದೇ ವೇಳೆ ಮೂರುವರೆ ದಶಕಗಳ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಗಣೇಶ ಮಂದಿರ ಉಳಿಸಿ ಕ್ರಿಯಾ ಸಮಿತಿ ಕಾನೂನು ಹೋರಾಟಕ್ಕೂ ಮುಂದಾಗಿದೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಿತಿ ನಿರ್ಧರಿಸಿದೆ.

ಇನ್ನೊಂದೆಡೆ, ಸರ್ಕಾರಿ ಜಾಗದಲ್ಲಿರುವ ಇತರ ಅನಧಿಕೃತ ಕಟ್ಟಡಗಳ ತೆರವಿನ ವಿಚಾರವನ್ನೂ ಪ್ರತಿಭಟನಾಕಾರರು ಪ್ರಸ್ತಾಪಿಸಿದ್ದಾರೆ. ಕಾಸರಗೋಡಿನ ವಿವಿಧ ಪ್ರದೇಶಗಳಲ್ಲಿರುವ ಧಾರ್ಮಿಕ ಹಾಗೂ ಸಂಘಟನೆಗಳಿಗೆ ಸಂಬಂಧಿಸಿದ ಅನಧಿಕೃತ ಕಟ್ಟಡಗಳ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆಯೇ? ಒಂದು ಕಟ್ಟಡದ ತೆರವಿಗೆ ಮಾತ್ರ ಇಷ್ಟೊಂದು ತರಾತುರಿ ಯಾಕೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಒಂದೆಡೆ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾದ ಅನಿವಾರ್ಯತೆ, ಮತ್ತೊಂದೆಡೆ 35 ವರ್ಷಗಳ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳಬೇಕೆಂಬ ಭಕ್ತರ ಹೋರಾಟ. ಈ ಎರಡರ ನಡುವಿನ ಸಂಘರ್ಷದಿಂದ ಜೋಡುಕಲ್ಲಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಗಣೇಶೋತ್ಸವದ ಚಪ್ಪರ ತೆರವಾಗುತ್ತದೆಯೇ ಅಥವಾ ಮೇಲ್ಮನವಿ ಮೂಲಕ ವಿವಾದಕ್ಕೆ ಹೊಸ ತಿರುವು ಸಿಗುತ್ತದೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Exit mobile version