Site icon Ullalavani

ಮಂಗಳೂರು : ಸಲೂನ್‌ನಲ್ಲಿ ಕಳ್ಳತನ – ದೂರು ದಾಖಲು

ಮಂಗಳೂರು, ನ.10: ನಗರದ ಪಂಪವೆಲ್ ಬಳಿ ಇರುವ ‘ವೆಸ್ಟ್ ಗೇಟ್ ಸೆಂಟರ್’ ಕಟ್ಟಡದಲ್ಲಿರುವ ಸಲೂನ್ ಒಂದರ ಬೀಗ ಮುರಿದು ನಗದು ಕಳವು ಮಾಡಿರುವ ಘಟನೆ ನಡೆದಿದ್ದು, ಪಕ್ಕದ ಅಂಗಡಿಯಲ್ಲೂ ಕಳ್ಳತನಕ್ಕೆ ಯತ್ನಿಸಲಾಗಿದೆ ಎಂದು ವರದಿಯಾಗಿದೆ.

ಎ. ಕೆ. ಶರತ್ ಕುಮಾರ್ ಎಂಬವರಿಗೆ ಸೇರಿದ ‘ಸಿಗ್ನೇಚರ್ ಸಲೂನ್’ ನಲ್ಲಿ ಕಳ್ಳತನ ನಡೆದಿದೆ ಎಂದು ದೂರು ನೀಡಲಾಗಿದೆ. ನವೆಂಬರ್ 8ರಂದು ರಾತ್ರಿ 9:30ಕ್ಕೆ ಕೆಲಸಗಾರರು ಎಂದಿನಂತೆ ಸಲೂನ್‌ನ ಶಟರ್‌ಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ನವೆಂಬರ್ 9ರಂದು ಬೆಳಿಗ್ಗೆ 7:00 ಗಂಟೆಗೆ ಬಂದು ನೋಡಿದಾಗ ಶಟರ್ ಅರ್ಧ ತೆರೆದಿರುವುದು ಕಂಡುಬಂದಿದೆ. ಅಂಗಡಿಯ ಒಳಗೆ ಪರಿಶೀಲಿಸಿದಾಗ ಅಪರಿಚಿತ ಕಳ್ಳರು ಅಕ್ರಮವಾಗಿ ಪ್ರವೇಶಿಸಿ, ಡ್ರಾವರ್‌ಗಳಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅದರಲ್ಲಿದ್ದ 1,700 ರೂಪಾಯಿ ನಗದನ್ನು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಅಲ್ಲದೆ, ಅದೇ ಸಲೂನ್ ಪಕ್ಕದಲ್ಲಿರುವ ‘ಬ್ಲೂಮ್ ಫ್ಲವರ್ಸ್’ ಎಂಬ ಹೂವಿನ ಅಂಗಡಿಯ ಬೀಗ ಮುರಿದು ಕಳ್ಳತನ ಮಾಡಲು ಯತ್ನಿಸಿರುವುದು ಕಂಡುಬಂದಿದೆ. ನವೆಂಬರ್ 8ರ ರಾತ್ರಿ 9:30 ರಿಂದ ನವೆಂಬರ್ 9ರ ಬೆಳಿಗ್ಗೆ 7:00 ಗಂಟೆಯ ಮಧ್ಯೆ ಅಪರಿಚಿತ ಕಳ್ಳರು ಯಾವುದೋ ಆಯುಧ ಬಳಸಿ ಶಟರ್‌ನ ಬೀಗ ಮುರಿದು, ಬಾಗಿಲಿಗೆ ಹಾನಿ ಮಾಡಿ ಈ ಕೃತ್ಯ ಎಸಗಿದ್ದಾರೆ. ಈ ಕುರಿತು ಸಿಗ್ನೇಚರ್ ಸಲೂನ್ ಮಾಲೀಕ ಎ. ಕೆ. ಶರತ್ ಕುಮಾರ್ ಅವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Exit mobile version