Site icon Ullalavani

ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆ ಆರೋಪ – ಕೆಎಂಎಫ್‌ಗೆ ಮಹಿಳೆಯಿಂದ ದೂರು

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಉತ್ಪಾದಿಸುವ ನಂದಿನಿ ಹಾಲಿನ ಗುಣಮಟ್ಟದ ಕುರಿತು ಇದೀಗ ಆತಂಕ ವ್ಯಕ್ತವಾಗಿದೆ. ಅರ್ಧ ಲೀಟರ್‌ನ ನಂದಿನಿ ಹಸುವಿನ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆಯಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಮಹಿಳೆಯೊಬ್ಬರು ಕೆಎಂಎಫ್‌ಗೆ ದೂರು ನೀಡಿದ್ದಾರೆ. ಈ ಘಟನೆ ಹಾಲಿನ ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕಗಳಲ್ಲಿನ ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಂಬಂಧಿ ಎಂದು ಹೇಳಲಾಗಿರುವ ನಾಗೂರ್ ರೋಜಾ ಅವರು ಭಾನುವಾರ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಫ್ರಿಡ್ಜ್‌ನಲ್ಲಿಟ್ಟಿದ್ದ ನಂದಿನಿ ಹಾಲಿನ ಪ್ಯಾಕೆಟ್ ತೆರೆದು ಕುದಿಸಲು ಪಾತ್ರೆಗೆ ಸುರಿಯುತ್ತಿದ್ದಾಗ ಹಾಲಿನೊಂದಿಗೆ ಸಣ್ಣ ಸತ್ತ ಜೇಡವೊಂದು ಪತ್ತೆಯಾಗಿದೆ. ಇದನ್ನು ಕಂಡು ಆಘಾತಕ್ಕೊಳಗಾದ ರೋಜಾ ಅವರು ತಕ್ಷಣ ಘಟನೆಯ ವಿಡಿಯೋ ಚಿತ್ರೀಕರಿಸಿದ್ದಾರೆ. ಕಳೆದ ಸುಮಾರು ಎರಡು ದಶಕಗಳಿಂದ ತಮ್ಮ ಕುಟುಂಬ ನಂದಿನಿ ಹಾಲು ಹಾಗೂ ಕೆಎಂಎಫ್‌ನ ಇತರ ಉತ್ಪನ್ನಗಳನ್ನು ಬಳಸುತ್ತಿದೆ. ಎಂದಿನಂತೆ ಹಾಲಿನ ಪ್ಯಾಕೆಟ್‌ಗಳನ್ನು ಮುಚ್ಚಿದ ಬಾಕ್ಸ್‌ನಲ್ಲಿ ಖರೀದಿಸಿ, ನೀರಿನಿಂದ ತೊಳೆದು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದ್ದಾಗಿ ಅವರು ತಿಳಿಸಿದ್ದಾರೆ.

ಜೇಡ ಪತ್ತೆಯಾದ ಬಳಿಕ ರೋಜಾ ಅವರು ಅದರ ವಿಡಿಯೋವನ್ನು ಹಾಲಿನ ಮಾರಾಟಗಾರರಿಗೆ ಕಳುಹಿಸಿದ್ದಾರೆ. ಪ್ಯಾಕೆಟ್ ಎಸೆಯುವಂತೆ ಮಾರಾಟಗಾರರು ಸಲಹೆ ನೀಡಿದರೂ, ಆಹಾರ ಉತ್ಪನ್ನದಲ್ಲಿ ಇಂತಹ ವಸ್ತು ಪತ್ತೆಯಾಗಿರುವುದು ಗಂಭೀರ ವಿಚಾರ ಎಂದು ಪರಿಗಣಿಸಿ ಅದನ್ನು ಎಸೆಯಲು ಅವರು ನಿರಾಕರಿಸಿದ್ದಾರೆ. ಬಳಿಕ ಕೆಎಂಎಫ್‌ನ ಘಟಕವಾದ ಮದರ್ ಡೇರಿಯ ಮಾರ್ಕೆಟಿಂಗ್ ಮ್ಯಾನೇಜರ್‌ಗೆ ಇಮೇಲ್ ಮೂಲಕ ಅಧಿಕೃತ ದೂರು ಸಲ್ಲಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 26, 27 ಹಾಗೂ 54ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದಾರೆ. ದೂರಿನ ಬೆನ್ನಲ್ಲೇ ಸೋಮವಾರ ಕೆಎಂಎಫ್‌ನ ಇಬ್ಬರು ಅಧಿಕಾರಿಗಳು ರೋಜಾ ಅವರ ಮನೆಗೆ ಭೇಟಿ ನೀಡಿದ್ದಾರೆ. ಪರಿಶೀಲನೆಗಾಗಿ ಹಾಲಿನ ಮಾದರಿ ಹಾಗೂ ಪ್ಯಾಕೆಟ್ ಅನ್ನು ಸಂಗ್ರಹಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಿ, ಹಾಲನ್ನು ಪ್ಯಾಕಿಂಗ್ ಮಾಡಿದ ಘಟಕವನ್ನು ಪತ್ತೆಹಚ್ಚುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ರೋಜಾ ತಿಳಿಸಿದ್ದಾರೆ. ಈ ಘಟನೆ ನಂದಿನಿ ಹಾಲಿನ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಚರ್ಚೆಗೆ ಕಾರಣವಾಗಿದೆ. ಇದೀಗ ಅಧಿಕಾರಿಗಳ ತನಿಖಾ ವರದಿಯತ್ತ ಗಮನ ಹರಿದಿದೆ.

Exit mobile version