ಉಳ್ಳಾಲ: ಹಬ್ಬಗಳ ಅಂತ್ಯದಲ್ಲಿ ಭಾವೈಕ್ಯತೆಯ ಸಂದೇಶ ಸಾರುತ್ತಾ ಎಲ್ಲರನ್ನೂ ಒಗ್ಗೂಡಿಸುವುದು ದೇವರು ಮೆಚ್ಚುವ ಕಾರ್ಯವಾಗಿದೆ. ಇಂತಹ ಆಚರಣೆಗಳಿಂದ ಪರಸ್ಪರರ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚಾರ-ವಿಚಾರಗಳನ್ನು ಅರಿಯಲು ಸಾಧ್ಯವಾಗುತ್ತದೆ. ಇದು ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಮತ್ತು ಪರಸ್ಪರ ಗೌರವವನ್ನು ಬೆಳೆಸುವ ಉತ್ತಮ ಕಾರ್ಯವಾಗಿದೆ. ಎಂದು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಆಂಡ್ರ್ಯೂ ಲಿಯೋ ಡಿಸೋಜ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಾಗೂ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಹಯೋಗದೊಂದಿಗೆ ತೊಕ್ಕೊಟ್ಟು ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಭಾವೈಕ್ಯತೆಯ ಬೆಳಕಿನ ದೀಪಾವಳಿ ಸಂಭ್ರಮಾಚರಣೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಕಾಂಗ್ರೆಸ್ ಪಕ್ಷ ಭಾವೈಕ್ಯತೆಯ ಸಂಕೇತವಾಗಿದ್ದು, ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಉಳ್ಳಾಲದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಎರಡನೇ ವರ್ಷದ ಸೌಹಾರ್ದ ದೀಪಾವಳಿ ಆಚರಣೆಯನ್ನು ಆಯೋಜಿಸುವ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಹಾಗೂ ಪರಸ್ಪರ ಪ್ರೀತಿಯ ಉತ್ತಮ ವಾತಾವರಣ ನಿರ್ಮಿಸುವ ಕಾರ್ಯ ಮಾಡಿದ್ದಾರೆ. ಇಂತಹ ಆಚರಣೆಗಳು ಪರಸ್ಪರರ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರಿಯಲು ಸಹಕಾರಿಯಾಗುವುದರ ಜೊತೆಗೆ ಸಮಾಜದ ಐಕ್ಯತೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ ಮಾತನಾಡಿ, ದಕ್ಷಿಣ ಕನ್ನಡದ ಜನರಿಗೆ ದೈವ-ದೇವರುಗಳ ಮೇಲಿರುವ ಭಕ್ತಿ, ಧಾರ್ಮಿಕ ನಂಬಿಕೆ ಹಾಗೂ ಪರಸ್ಪರ ಪ್ರೀತಿಯೇ ನಮ್ಮ ಸಂಸ್ಕೃತಿಯ ವಿಶೇಷತೆ. ಸರ್ವಧರ್ಮಗಳ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸುವ ಮೂಲಕ ಶಕ್ತಿಯುತವಾದ ಸಂದೇಶವನ್ನು ಸಮಾಜಕ್ಕೆ ಸಾರುವ ಕೆಲಸವಾಗಬೇಕು. ದ್ವೇಷವನ್ನು ದೂರವಾಗಿಸಿ, ಪ್ರೀತಿ ಮತ್ತು ಸೌಹಾರ್ದತೆಯನ್ನು ಬೆಳೆಸುವ ಕಾರ್ಯಗಳು ಹೆಚ್ಚಾಗಬೇಕು. ದೀಪಾವಳಿ, ಕ್ರಿಸ್ಮಸ್, ರಂಜಾನ್ ಸೇರಿದಂತೆ ಎಲ್ಲ ಧರ್ಮಗಳ ಹಬ್ಬಗಳ ಉದ್ದೇಶವೂ ಒಂದೇ. ಮನುಷ್ಯರ ನಡುವೆ ಪ್ರೀತಿ, ಸಹಬಾಳ್ವೆ ಮತ್ತು ಸಾಮರಸ್ಯವನ್ನು ಬೆಳೆಸುವುದೇ ಎಲ್ಲ ಹಬ್ಬಗಳ ಆಶಯ ಎಂದರು.
ಈ ಮೌಲ್ಯಗಳು ಮುಂದಿನ ಪೀಳಿಗೆಗೂ ತಿಳಿಯಬೇಕು. ಎಲ್ಲ ಧರ್ಮದವರನ್ನೂ ಒಂದೆಡೆ ಸೇರಿಸಿ ದೀಪಾವಳಿ ಆಚರಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.
ಕಾರ್ಯಕ್ರಮದಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ಬರಹಗಾರ್ತಿ, ಕವಯಿತ್ರಿ ಶಮೀಮ ಕುತ್ತಾರ್ ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ , ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಮುಡಾ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಚಂದ್ರಿಕಾ ರೈ, ತುಳು ಪರಿಷತ್ ಅಧ್ಯಕ್ಷರು ಶುಭೋದಯ ಆಳ್ವ , ತಾ.ಪಂ ಮಾಜಿ ಅಧ್ಯಕ್ಷ ಮೋನು ಮಲಾರ್ , ಹಿಂದುಳಿದ ವರ್ಗಗಳ ಅಧ್ಯಕ್ಷ ವಿವೇಕಾನಂದ ಸನಿಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪಿಲಾರ್, ಶೌಕತ್ ಆಲಿ ,ಎ.ಕೆ ರೆಹಮಾನ್ ಕೋಡಿಜಾಲ್, ತಲಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ವೈಭವ್ ಶೆಟ್ಟಿ , ಯು.ಟಿ ಫರೀದ್ , ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ. ಮುಡಾ ಸದಸ್ಯೆ ಸಬಿತಾ ಮಿಸ್ಕಿತ್ , ಶಶಿಕಲಾ , ದೇವಕಿ ಆರ್ ಉಳ್ಳಾಲ್, ರಝಿಯಾ ಇಬ್ರಾಹಿಂ , ಅರುಣ್ ಮಾರ್ಗತಲೆ , ಮುಡಿಪು ಬ್ಲಾಕ್ ಮಹಿಳಾ ಅಧ್ಯಕ್ಷೆ ವೃಂದ ಮೇರೆಜಮಲು ,ಸಾಹಿಲ್ ಮಂಚಿಲ, ರಿಚರ್ಡ್ ಉಪಸ್ಥಿತರಿದ್ದರು.
ಈ ಸಂದರ್ಭ ಕಿಸಾನ್ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಸನ್ ಕುಂಞಿ ಕೋಡಿಜಾಲ್ ಇವರಿಗೆ ಆದೇಶ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮ ಸಂಯೋಜಕಿ, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನ್ ಸ್ವಾಗತಿಸಿದರು. ಕುಮಾರಿ ಸನ್ನಿಧಿ ಕಾರ್ಯಕ್ರಮ ನಿರೂಪಿಸಿದರು. ರಝಿಯಾ ಇಬ್ರಹಿಂ ವಂದಿಸಿದರು.
ಕಾರ್ಯಕ್ರಮದಲ್ಲಿ ಲಕ್ಕಿ ಕೂಪನ್ ವಿಜೇತ ಇಬ್ಬರು ಮಹಿಳೆಯರಿಗೆ ಟೈಲರಿಂಗ್ ಯಂತ್ರವನ್ನು ವಿತರಿಸಿದರು. ಇದೇ ಸಂದರ್ಭ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಇದೇ ಸಂದರ್ಭ ರೂಪೇಶ್ ಭಟ್ನಗರ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಜರಗಿತು.
ʻಭಾವೈಕ್ಯತೆಯ ಬಹುತ್ವದ ದೀಪಾವಳಿ ಆಚರಣೆ: ಬರಹಗಾರ್ತಿ ಶಮೀಮಾ ಕುತ್ತಾರ್
ಭಾವೈಕ್ಯತೆಯ ಬಹುತ್ವದ ದೀಪಾವಳಿ ಆಚರಣೆಗಳು ಪ್ರತಿಯೊಂದು ಹಬ್ಬದ ನೈಜ ಅರ್ಥವನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತವೆ. ಪ್ರತಿಯೊಂದು ಧರ್ಮದ ಹಬ್ಬಗಳ ಹಿಂದೆಯೂ ಪ್ರೀತಿ, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶವಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಸಹಬಾಳ್ವೆಯನ್ನು ಬೆಳೆಸುತ್ತವೆ. ಒಂದು ಮನೆಯ ಸಂತೋಷ ಮತ್ತು ನೆಮ್ಮದಿಯ ಹಿಂದೆ ಮಹಿಳೆಯರ ಪಾತ್ರ ಬಹಳ ಮಹತ್ವದ್ದಾಗಿದೆ. ಮಹಿಳೆಯರು ಕುಟುಂಬವನ್ನು ಒಗ್ಗೂಡಿಸುವ ಶಕ್ತಿಯಾಗಿದ್ದಾರೆ. ಅದೇ ರೀತಿ ಸಮಾಜದಲ್ಲಿಯೂ ಮಹಿಳೆಯರು ಒಗ್ಗಟ್ಟಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳಿಗೆ ಯಾವುದೇ ಧಕ್ಕೆ ಬಾರದಂತೆ, ಎಲ್ಲ ಧರ್ಮ ಮತ್ತು ಸಮುದಾಯಗಳ ಭಾವನೆಗಳಿಗೆ ಗೌರವ ನೀಡುತ್ತಾ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಶ್ಲಾಘನೀಯ.
ಎಲ್ಲಾ ಧರ್ಮದವರನ್ನು ಒಗ್ಗೂಡಿಸುವ ಕಾರ್ಯ: ಅಮಿತಾ ಅಶ್ವಿನ್
ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ವತಿಯಿಂದ ಎರಡನೇ ವರ್ಷದ ಸೌಹಾರ್ದ ದೀಪಾವಳಿ ಆಚರಣೆಯನ್ನು ಆಯೋಜಿಸುವ ಮೂಲಕ ಎಲ್ಲಾ ಧರ್ಮದವರನ್ನು ಒಗ್ಗೂಡಿಸುವ ಉತ್ತಮ ಕಾರ್ಯ ನಡೆಯುತ್ತಿದೆ. ಆಟೋಟಗಳಲ್ಲಿ ಭಾಗವಹಿಸುತ್ತಾ, ಪರಸ್ಪರ ಸಂತಸ ಹಂಚಿಕೊಳ್ಳುತ್ತಾ ಎಲ್ಲರೂ ಒಂದಾಗಿ ದೀಪಾವಳಿ ಹಬ್ಬವನ್ನು ಸಂಭ್ರಮಿಸುವ ಈ ಕಾರ್ಯಕ್ರಮವು ಭಾವೈಕ್ಯತೆಯ ಸಂದೇಶ ಸಾರುತ್ತಿದೆ. ಧರ್ಮಗಳ ನಡುವಿನ ಸೌಹಾರ್ದತೆ, ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯನ್ನು ಬೆಸೆಯುವ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತವೆ.
ಅಮಿತಾ ಅಶ್ವಿನ್
ಅಧ್ಯಕ್ಷರು
ಉಳ್ಳಾಲ ನಗರ ಕಾಂಗ್ರೆಸ್ ಸಮಿತಿ