Site icon Ullalavani

ಮಂಗಳೂರು ವಿವಿ: ‘ಕನಕ ಕೀರ್ತನ ಗಂಗೋತ್ರಿ’ಗೆ ಗಾಯಕರಿಂದ ಅರ್ಜಿ ಆಹ್ವಾನ

ಕೊಣಾಜೆ: ಕನಕ ಜಯಂತಿ ಪ್ರಯುಕ್ತ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ನವೆಂಬರ್ 24ರಂದು ‘ಕನಕ ಕೀರ್ತನ ಗಂಗೋತ್ರಿ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಪೂರ್ವಾಹ್ನ 10 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ವಿವೇಕ ರೈ ವಿಚಾರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ ಏಳು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಉಳ್ಳಾಲ, ಮಂಗಳೂರು, ಬಂಟ್ವಾಳ, ಪುತ್ತೂರು, ಮೂಲ್ಕಿ, ಮೂಡುಬಿದಿರೆ, ಮಂಜೇಶ್ವರ ಮತ್ತು ಕಾಸರಗೋಡು ವ್ಯಾಪ್ತಿಯ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ವೈಯಕ್ತಿಕ ಗಾಯನ ವಿಭಾಗದಲ್ಲಿ ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಹಾಗೂ ಅಧ್ಯಾಪಕರಿಗೆ ಅವಕಾಶವಿದ್ದು, ಸಮೂಹ ಗಾಯನ ವಿಭಾಗದಲ್ಲಿ ಪದವಿ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಬಹುದು. ಸ್ಪರ್ಧಿಗಳು ಕನಕದಾಸರ ಕೀರ್ತನೆಗಳನ್ನು ಮಾತ್ರ ಹಾಡಬೇಕು. ಒಬ್ಬರಿಗೆ ಒಂದು ಕೀರ್ತನೆ ಹಾಡಲು ಅವಕಾಶವಿದ್ದು, ಗರಿಷ್ಠ ನಾಲ್ಕು ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಸಮೂಹ ಗಾಯನದಲ್ಲಿ ಕನಿಷ್ಠ ಮೂರು ಹಾಗೂ ಗರಿಷ್ಠ ಆರು ಮಂದಿ (ಹಿಮ್ಮೇಳನ ಸೇರಿ) ಭಾಗವಹಿಸಬಹುದು.

ಶಾಸ್ತ್ರೀಯ ಸಂಗೀತದ ಜೊತೆಗೆ ಜನಪದ, ಜನಪ್ರಿಯ ಹಾಗೂ ಸುಗಮ ಸಂಗೀತದ ಶೈಲಿಗಳಲ್ಲಿಯೂ ಕೀರ್ತನೆಗಳನ್ನು ಹಾಡಬಹುದು. ಆಧುನಿಕ ಸಂಗೀತ ಸಾಧನಗಳನ್ನು ಬಳಸಿ ಹೊಸ ರಾಗಗಳಲ್ಲಿಯೂ ಪ್ರಸ್ತುತಪಡಿಸಲು ಅವಕಾಶವಿದೆ.

ಪ್ರತಿ ವೈಯಕ್ತಿಕ ಗಾಯನ ವಿಭಾಗದಲ್ಲಿ ಆಯ್ಕೆಯಾಗುವ ಮೂವರು ಹಾಗೂ ‘ಕನಕ ಸಮೂಹ ಗಾಯನ’ ವಿಭಾಗದಲ್ಲಿ ಆಯ್ಕೆಯಾಗುವ ಎರಡು ತಂಡಗಳಿಗೆ ತಲಾ ₹2,000 ನಗದು ಬಹುಮಾನ, ಕನಕ ಪುರಸ್ಕಾರ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು. ಈ ಗೌರವವನ್ನು ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆಯುವ ‘ಕನಕ ಸ್ಮೃತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.

ಆಸಕ್ತರು ನವೆಂಬರ್ 20ರೊಳಗೆ ತಮ್ಮ ಹೆಸರು, ಶಾಲೆ ಅಥವಾ ಕಾಲೇಜಿನ ವಿಳಾಸ, ತರಗತಿ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು.

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ:

Exit mobile version