Site icon Ullalavani

ಹದಗೆಟ್ಟಿರುವ ಕುಂಪಲ ಮುಖ್ಯ ರಸ್ತೆಯ ಅಭಿವೃದ್ಧಿಗೆ ಸಚಿವ ಯು.ಟಿ. ಖಾದರ್ ಸಹಕರಿಸಲಿ: ಸತೀಶ್ ಕುಂಪಲ

ಉಳ್ಳಾಲ, ನ. 09: ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಿಂದ ಕುಂಪಲ ಬೈಪಾಸ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಅತ್ಯಂತ ಕಿರಿದಾಗಿದ್ದು, ಇತ್ತೀಚೆಗೆ ಅಮೃತ್ 2.0 ಯೋಜನೆಯಡಿ ನಡೆದ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯಿಂದಾಗಿ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯ ಅಗಲೀಕರಣ ಹಾಗೂ ಕಾಂಕ್ರಿಟೀಕರಣಕ್ಕೆ ಕ್ಷೇತ್ರದ ಶಾಸಕರೂ, ಸಚಿವರೂ ಆಗಿರುವ ಯು.ಟಿ. ಖಾದರ್ ಅವರು ವಿಶೇಷ ಮುತುವರ್ಜಿ ವಹಿಸಿ ಸಹಕರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ಶಾಸಕರ ನಿಧಿಯ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಮೂರುಕಟ್ಟ ಪಳ್ಳ ರಸ್ತೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಮೂರುಕಟ್ಟ ಪ್ರದೇಶದ ಕೆರೆ ಅಭಿವೃದ್ಧಿಗೊಳ್ಳುತ್ತಿರುವುದು ಸ್ವಾಗತಾರ್ಹ. ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೂ ನಮ್ಮ ಸಂಪೂರ್ಣ ಸಹಕಾರವಿದೆ. ಪಾಳುಬಿದ್ದಿದ್ದ ಮೂರುಕಟ್ಟ ಪಳ್ಳ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವಂತೆ ವಿಧಾನ ಪರಿಷತ್ ಸದಸ್ಯರಲ್ಲಿ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ ಕೂಡಲೇ ಅನುದಾನ ಬಿಡುಗಡೆ ಮಾಡಿದ ಪರಿಣಾಮ ರಸ್ತೆ ಸುಂದರವಾಗಿ ಕಾಂಕ್ರಿಟೀಕರಣಗೊಂಡಿದೆ ಎಂದರು.

ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಮಾತನಾಡಿ, ಪುರಸಭೆಯಲ್ಲಿ ಅನುದಾನದ ಕೊರತೆಯಿರುವುದನ್ನು ಮನಗಂಡ ಸತೀಶ್ ಕುಂಪಲ ಅವರು ಪಳ್ಳ ರಸ್ತೆ ಕಾಂಕ್ರಿಟೀಕರಣಕ್ಕೆ ವಿಧಾನ ಪರಿಷತ್ ಸದಸ್ಯರಿಂದ ಅನುದಾನ ಕೊಡಿಸಿದ್ದಾರೆ. ಮೂರುಕಟ್ಟ ಕೆರೆಗೆ ತಡೆಗೋಡೆ ನಿರ್ಮಿಸುವುದು ಅನಿವಾರ್ಯವಾಗಿದ್ದು, ಮೂಡಾದ ವಿಶೇಷ ಐದು ಕೋಟಿ ರೂ. ಅನುದಾನದಲ್ಲಿ ಕೆರೆಯು ಸಮಗ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.

ಬಿಜೆಪಿ ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಸೋಮೇಶ್ವರ ಪುರಸಭಾ ಸದಸ್ಯರಾದ ಹರೀಶ್ ಕುಂಪಲ, ಮೋಹನ್ ಶೆಟ್ಟಿ ಕುಂಪಲ, ಜಯ ಪೂಜಾರಿ, ಯುವ ಮೋರ್ಚಾ ಮಂಡಲ ಉಪಾಧ್ಯಕ್ಷ ಸೂರಜ್ ಸಾಗರ್ ಕುಂಪಲ, ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶಿವಾನಂದ ಟೈಲರ್, ಅರುಣ್ ಸಂಕೊಳಿಗೆ, ಪ್ರಮುಖರಾದ ದೀಕ್ಷಿತ್ ನಿಸರ್ಗ, ಉಮೇಶ್ ಕುಂಪಲ, ಸತ್ಯಪ್ರಸಾದ್, ಅಶೋಕ್, ಮನೋಹರ್ ಗಟ್ಟಿ, ಕಿರಣ್, ಚಂದ್ರಹಾಸ್ ಮೂರುಕಟ್ಟ, ವಿನೋದ್ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕುಂಪಲ ಚಿತ್ರಾಂಜಲಿ ನಗರದ ರಸ್ತೆಯೂ ದುಸ್ಥಿತಿಯಲ್ಲಿದೆ. ಪಕ್ಷದ ಜಿಲ್ಲಾಧ್ಯಕ್ಷನ ನೆಲೆಯಲ್ಲಿ ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಲ್ಲಿ ಅನುದಾನಕ್ಕಾಗಿ ಮನವಿ ಮಾಡುತ್ತೇನೆ. ಜನರ ನಿರೀಕ್ಷೆಗೆ ಸಂಪೂರ್ಣವಾಗಿ ತಲುಪಲು ಸಾಧ್ಯವಾಗದಿದ್ದರೂ ನಮ್ಮ ಆತ್ಮತೃಪ್ತಿಯಾಗುವಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸೋಣ. ಚಿತ್ರಾಂಜಲಿ ನಗರದ ರಸ್ತೆಯನ್ನು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರ ಅನುದಾನದಲ್ಲಿ ಶೀಘ್ರದಲ್ಲೇ ಕಾಂಕ್ರಿಟೀಕರಣಗೊಳಿಸಲಾಗುವುದು.

— ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷರು

Exit mobile version