ಧಾರ್ಮಿಕ ಜಾಗೃತಿ, ತೌಹೀದ್ ಸಂದೇಶ ಹಾಗೂ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಿದ ಭಾಷಣಕಾರರು
ಸಜೀಪನಡು: ಧಾರ್ಮಿಕ ಜಾಗೃತಿ ಮೂಡಿಸುವುದು, ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಕುರಿತು ಅರಿವು ಮೂಡಿಸುವುದು ಹಾಗೂ ಪವಿತ್ರ ಕುರ್ಆನ್ ಮತ್ತು ಪ್ರವಾದಿ ಮುಹಮ್ಮದ್ (ಸ.ಅ) ಅವರ ಸುನ್ನತ್ನ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ KSA ಬೋಳಿಯಾರ್–ಸಜೀಪನಡು ಘಟಕದ ವತಿಯಿಂದ ಸಜೀಪನಡುವಿನಲ್ಲಿ ಇಸ್ಲಾಮಿಕ್ ಪಬ್ಲಿಕ್ ಪ್ರೋಗ್ರಾಂ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲಾಲ್ ಮಸ್ಜಿದ್ ಸಜೀಪನಡುವಿನ ಅಧ್ಯಕ್ಷ ಜಾಬಿರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹುಝೈರ್ ಸಜೀಪ ಅವರು ಸಲಫಿ ಸಿದ್ಧಾಂತದ ಮೂಲ ಆಶಯಗಳು ಹಾಗೂ ಸಮಾಜದಲ್ಲಿ ಈ ಸಿದ್ಧಾಂತದ ಕುರಿತು ಪ್ರಚಲಿತದಲ್ಲಿರುವ ತಪ್ಪು ಕಲ್ಪನೆಗಳ ಬಗ್ಗೆ ವಿವರಿಸಿದರು. ಸಲಫಿಗಳು ಕಬರ್ ಝಿಯಾರತ್ ಮಾಡುವುದಿಲ್ಲ ಮತ್ತು ಪ್ರವಾದಿಯವರ ಮೇಲೆ ಸ್ವಲಾತ್ ಹೇಳುವುದಿಲ್ಲ ಎಂಬ ಆರೋಪಗಳಿಗೆ ಕುರ್ಆನ್ ಹಾಗೂ ಅಧಿಕೃತ ಹದೀಸ್ಗಳ ಆಧಾರದಲ್ಲಿ ಉತ್ತರಿಸಿದ ಅವರು, ಕಬರ್ ಝಿಯಾರತ್ನ ಮಹತ್ವ ಮತ್ತು ಪ್ರವಾದಿಯವರ ಮೇಲೆ ಸ್ವಲಾತ್ ಹೇಳುವ ಶ್ರೇಷ್ಠತೆಯನ್ನು ತಿಳಿಸಿದರು.
ನಂತರ ಮಾತನಾಡಿದ ಡಾ. ಹಫೀಝ್ ಸ್ವಲಾಹಿ ಅವರು ಪ್ರವಾದಿ ಮುಹಮ್ಮದ್ (ಸ.ಅ) ಅವರ ಮೇಲಿನ ಪ್ರೀತಿಯ ಮಹತ್ವವನ್ನು ವಿವರಿಸಿದರು. ಪ್ರವಾದಿಯವರ ಮೇಲಿನ ಪ್ರೀತಿ ಕೇವಲ ಮಾತುಗಳಿಗೆ ಸೀಮಿತವಾಗದೆ, ಅವರ ಜೀವನಾದರ್ಶ, ಕರುಣೆ, ಮಾನವೀಯತೆ ಹಾಗೂ ಸನ್ನಡತೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ವ್ಯಕ್ತವಾಗಬೇಕು ಎಂದು ಹೇಳಿದರು.
ಮುಖ್ಯ ಭಾಷಣಕಾರರಾದ ಶಿಹಾಬ್ ಎಡಕ್ಕರ ಅವರು ‘ಲಾ ಇಲಾಹ ಇಲ್ಲಲ್ಲಾಹ್’ ಎಂಬ ವಿಷಯದ ಕುರಿತು ಮಾತನಾಡಿ, ಇಸ್ಲಾಮಿನ ಮೂಲಾಧಾರವಾದ ಏಕದೇವ ವಿಶ್ವಾಸದ ಮಹತ್ವವನ್ನು ವಿವರಿಸಿದರು. ಪ್ರಾರ್ಥನೆ ಮತ್ತು ಆರಾಧನೆ ಅಲ್ಲಾಹನಿಗೆ ಮಾತ್ರ ಮೀಸಲಾಗಿರಬೇಕು ಎಂದು ತಿಳಿಸಿದ ಅವರು, ಕಬರ್ ಝಿಯಾರತ್ ಮತ್ತು ಕಬರ್ ಆರಾಧನೆಯ ನಡುವಿನ ವ್ಯತ್ಯಾಸವನ್ನು ಕುರ್ಆನ್ ಹಾಗೂ ಹದೀಸ್ಗಳ ಆಧಾರದಲ್ಲಿ ವಿವರಿಸಿದರು. ಮರಣ ಹೊಂದಿದವರಿಗಾಗಿ ಪ್ರಾರ್ಥಿಸುವುದು ಮತ್ತು ಅವರನ್ನೇ ಪ್ರಾರ್ಥನೆಗಾಗಿ ಕರೆಯುವುದು ವಿಭಿನ್ನ ವಿಚಾರಗಳಾಗಿದ್ದು, ಇಸ್ಲಾಮಿನ ಏಕದೇವ ವಿಶ್ವಾಸವನ್ನು ಶುದ್ಧವಾಗಿ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಇನ್ನೋರ್ವ ಭಾಷಣಕಾರ ಇಬ್ರಾಹಿಂ ಖಲೀಲ್ ತಲಪಾಡಿ ಅವರು ಸಮಾಜದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆ ಮತ್ತು ಅದರಿಂದ ಉಂಟಾಗುತ್ತಿರುವ ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಗಳ ಕುರಿತು ಮಾತನಾಡಿದರು. ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಜನತೆಯಿಂದ ಕುಟುಂಬಗಳು ಅನುಭವಿಸುತ್ತಿರುವ ನೋವು, ಮಕ್ಕಳ ಭವಿಷ್ಯದ ಮೇಲಿನ ದುಷ್ಪರಿಣಾಮ ಹಾಗೂ ಸಮಾಜದ ಸ್ವಾಸ್ಥ್ಯದ ಮೇಲಾಗುತ್ತಿರುವ ಪರಿಣಾಮಗಳನ್ನು ವಿವರಿಸಿದರು. ಪವಿತ್ರ ಕುರ್ಆನ್, ಬೈಬಲ್ ಮತ್ತು ಉಪನಿಷತ್ತುಗಳ ಬೋಧನೆಗಳನ್ನು ಉಲ್ಲೇಖಿಸಿದ ಅವರು, ಯುವಜನತೆ ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಹಾಗೂ ನೈತಿಕ ಜೀವನವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಕುರು ಉಳ್ಳಾಲ, ಶಫೀಕ್ ಸಜೀಪ, ಹಬೀಬ್ ಸಜೀಪ ಹಾಗೂ ಅಶ್ರಫ್ ಬೋಳಿಯಾರ್ ಉಪಸ್ಥಿತರಿದ್ದರು.
ಬಿಲಾಲ್ ಮಸ್ಜಿದ್ ಸಜೀಪನಡುವಿನ ಕಾರ್ಯದರ್ಶಿ ಇರ್ಷಾದ್ ಸಜೀಪ ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಜಾಗೃತಿ, ಇಸ್ಲಾಮಿನ ಮೂಲಭೂತ ವಿಶ್ವಾಸಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸಿದ ಕಾರ್ಯಕ್ರಮವು ಧಾರ್ಮಿಕ ಚಿಂತನೆಗೆ ವೇದಿಕೆಯಾಯಿತು.