Site icon Ullalavani

ಜಾಗದ ವಿಚಾರದಲ್ಲಿ ದಂಪತಿಗಳ ಮೇಲೆ ಹಲ್ಲೆ ಪ್ರಕರಣ: ಎಂಟು ಮಂದಿಗೆ ದಂಡ ವಿಧಿಸಿದ ನ್ಯಾಯಾಲಯ

ಬಂಟ್ವಾಳ: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗೆ ಸೇರಿದ ದಂಪತಿಗಳ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದ್ದು, ಮಾನ್ಯ ನ್ಯಾಯಾಲಯವು ಒಟ್ಟು ರೂ.1,01,000 ದಂಡ ವಿಧಿಸಿ ಆದೇಶಿಸಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರಪಾಡಿ ಅಲಿಪಾದೆ ಎಂಬಲ್ಲಿ 2022ರ ಅಕ್ಟೋಬರ್ 24ರಂದು ರಾತ್ರಿ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದ ಮನೆಯವರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಸಂದರ್ಭದಲ್ಲಿ ರಾಜೇಶ್ ಮತ್ತು ಅವರ ಪತ್ನಿಯ ಮೇಲೆ ನೆರೆಮನೆಯ ನಿವಾಸಿಗಳಾದ ಕೃಷ್ಣಪ್ಪ ನಾಯ್ಕ, ಅವರ ಪತ್ನಿ ಜಯಂತಿ, ಮಗ ವಿನೋದ ಹಾಗೂ ಪಕ್ಕದ ಮನೆಯವರಾದ ಮುನ್ನ ಮತ್ತು ಲಕ್ಷ್ಮಣ ಸೇರಿದಂತೆ ಇತರ ನಾಲ್ಕೈದು ಮಂದಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 79/2022ರಂತೆ ಐಪಿಸಿ ಕಲಂ 307, 143, 147, 148, 323, 324, 325, 354, 342, 452 ಜೊತೆಗೆ 34 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಅಂದಿನ ಬಂಟ್ವಾಳ ಪೊಲೀಸ್ ಉಪಾಧೀಕ್ಷಕ ಪ್ರತಾಪ್ ಸಿಂಗ್ ಥೋರಟ್ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಆರೋಪಿಗಳಾದ ಕೃಷ್ಣಪ್ಪ ನಾಯ್ಕ, ಜಯಂತಿ, ಮುನ್ನ ಅಲಿಯಾಸ್ ಹೇಮಂತ್ ನಾಯ್ಕ, ವಿಶ್ವನಾಥ, ಭೋಜ, ಹರಿ ಅಲಿಯಾಸ್ ಹರಿಶ್ಚಂದ್ರ, ಗುಲಾಬಿ ಹಾಗೂ ರುಕ್ಮಿಣಿ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ 2026ರ ನವೆಂಬರ್ 5ರಂದು ಒಟ್ಟು ರೂ.1,01,000 ದಂಡ ವಿಧಿಸಿ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

Exit mobile version