ಮಂಗಳೂರು : ಇಲೆಕ್ಟ್ರೀಷಿಯನ್ ಆಗಿ ಕಾರ್ಯನಿರ್ವಹಿಸುವ ವ್ಯಕ್ತಿಯನ್ನು ತಡರಾತ್ರಿ ವೇಳೆ ತಡೆಹಿಡಿದು ರೂ.4000 ದಷ್ಟು ಹಣವನ್ನು ದೋಚಿರುವ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂಲತ: ವಿಟ್ಲ ಮುಡ್ನೂರು ನಿವಾಸಿ , ಪಾಂಡೇಶ್ವರದ ಶಿವನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿರುವ ರವಿರಾಜ್ ಪೊಲೀಸರಿಂದ ದೌರ್ಜನ್ಯಕ್ಕೊಳಗಾದವರು. ಕಂಕನಾಡಿಯ ಖಾಸಗಿ ಸಂಸ್ಥೆಯಲ್ಲಿ ಇಲೆಕ್ಟ್ರೀಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆ.25 ರಂದು ರಾತ್ರಿ ೧೦ ಗಂಟೆಗೆ ನೆಹರು ಮೈದಾನದಲ್ಲಿ ವಾಕಿಂಗ್ ಮುಗಿಸಿ ಬಾಡಿಗೆ ಮನೆ ಕಡೆಗೆ ನಡೆದುಕೊಂಡು ಹೋಗುವ ಸಂದರ್ಭ ಆರ್‌ಟಿಓ ಸಮೀಪ ಹೊಯ್ಸಳ ವಾಹನದಲ್ಲಿ ಬಂದ ಚಾಲಕರಾದ ಪಾಂಡೇಶ್ವರ ಠಾಣೆಯ ಹೀರಣ್ಣ ಬೆನ್ನಿ, ಸಿಬ್ಬಂದಿಗಳಾದ ಶಿವರಾಜ್ ಮತ್ತು ಉಮನಾಥ್ ಎಂಬವರುಗಳು ರವಿರಾಜ್ ಅವರನ್ನು ತಡೆದು ನಿಲ್ಲಿಸಿ ಬೆತ್ತದಿಂದ ಭುಜಕ್ಕೆ ಮತ್ತು ಕಾಲಿಕೆ ಹೊಡೆದು, ಕಿಸೆಯಲ್ಲಿದ್ದ ಮೊಬೈಲನ್ನು ತೆಗೆದು, ಅದರ ಕವರಿನಲ್ಲಿದ್ದ ರೂ.300 ಹಣವನ್ನು ಬಲತ್ಕಾರವಾಗಿ ಕಸಿದು ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೈಲಿಗೆ ಹಾಕುವುದಾಗಿ ಬೆದರಿಸಿ ತೆರಳಿದ್ದರು. ಮತ್ತೆ ಆ.27 ರಂದು ಶಿವರಾಜ್ ಅವರು ಅದೇ ಸ್ಥಳದಲ್ಲಿ ವಾಕಿಂಗ್ ಮಾಡುವ ಸಂದರ್ಭದಲ್ಲಿ ಮತ್ತೆ ಹಿರಣ್ಣ ಬೆನ್ನಿ ಮತ್ತು ತಂಡ ಹೊಯ್ಸಳ ವಾಹನದಲ್ಲಿ ಬಂದು ಮೊಬೈಲ್ ಅನ್ನು ಕಸಿದು ಮೊಬೈಲ್ ಕವರಿನಲ್ಲಿದ್ದ ಕರ್ನಾಟಕ ಬ್ಯಾಂಕ್, ಯೂನಿಯನ್ ಬ್ಯಾಂಕುಗಳ ಎರಡು ಎಟಿಎಂ ಕಾರ್ಡು, ರೂ.1000 ನಗದು ಹಣ ಹಾಗೂ ದ್ವಿಚಕ್ರ ವಾಹನದ ಕೀಯನ್ನು ಕಸಿದು ನೀನು ಇಲ್ಲಿಯೇ ಇರು ಎಂದು ಹೇಳಿ ತೆರಳಿದ್ದರು. ಮತ್ತೆ ರಾತ್ರಿ ೧೧.೩೦ ಕ್ಕೆ ಹೊಯ್ಸಳ ವಾಹನದಲ್ಲಿ ಬಂದವರು ಬಲಾತ್ಕಾರವಾಗಿ ವಾಹನದಲ್ಲಿ ಕುಳ್ಳಿರಿಸಿ ಮತ್ತೆ ಹಣದ ಬೇಡಿಕೆ ಇಟ್ಟಿದ್ದಾರೆ. ಈ ಸಂದರ್ಭ ನೊಂದ ರವಿರಾಜ್ ತನ್ನ ಬಳಿ ATM ಮಾತ್ರವಿರುವುದಾಗಿ ಹೇಳಿದಾಗ, ಮೊಬೈಲಿನ ಪಾಸ್ ವರ್ಡ್ ಪಡೆದು ಮೊಬೈಲಿನಲ್ಲಿಯೇ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ ಅದರಲ್ಲಿದ್ದ ರೂ.5000 ಇರುವುದನ್ನು ಕಂಡು ರೂ.2000 ಹಣ ನೀಡಬೇಕೆಂದು ಒತಾಯಿಸಿದ್ದಾರೆ. ಹಣ ನೀಡದೇ ಹೋದಲ್ಲಿ ಕೇಸ್ ಮಾಡಿ ಜೈಲಿಗೆ ಹಾಕುವುದಾಗಿಯೂ ಬೆದರಿಸಿದ್ದಾರೆ. ತನ್ನ ಲೋನ್ ಹಣ ಅಷ್ಟು ಹಣ ನೀಡಲು ಅಸಾಧ್ಯ ಎಂದು ಯಾವುದೇ ತಪ್ಪು ಮಾಡದಿದ್ದರೂ ಕಿರುಕುಳ ನೀಡದಿರಿ ಅಂದು ಗೋಗರೆದರೂ ಪಟ್ಟು ಬಿಡದ ಮೂವರು ಪೊಲೀಸರು ಮಂಗಳಾದೇವಿ ದೇವಸ್ಥಾನದ ಬಳಿಯಿರುವ ಎಸ್ ಬಿಐ ಬ್ಯಾಂಕಿನ ಎಟಿಎಂ ಬಳಿ ಕರೆದುಕೊಂಡು ಹೋಗಿ, ಎಟಿಎಂನಿಂದ ಹಣ ಡ್ರಾ ಮಾಡಿಸಿ ಒಟ್ಟು ರೂ.3000 ಹಣವನ್ನು ಕಸಿದು , ರವಿರಾಜ್ ಅವರನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.
ಮತ್ತೆ ನ.4 ರಂದು ದ್ವಿಚಕ್ರ ವಾಹನದಲ್ಲಿ ಇದ್ದ ಸಂದರ್ಭ ರವಿರಾಜ್ ಅವರ ಕೀಯನ್ನು ಕಸಿದು ಮತ್ತದೇ ರೀತಿಯಲ್ಲಿ ಫಿಝಾ ಮಾಲ್ ವರೆಗೂ ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ ಮೊಬೈಲನ್ನು ಪಡೆದು ಠಾಣೆಗೆ ಬಂದು ಕೊಂಡೊಯ್ಯಲು ಸೂಚಿಸಿದ್ದಾರೆ. ದಂಡ ಕಟ್ಟಬೇಕು ನಂತರವೇ ಮೊಬೈಲ್ ನೀಡುವುದಾಗಿ ಮೊದಲಿಗೆ ತಿಳಿಸಿದರೂ, ಬಳಿಕ ಹಣ ನೀಡುವಂತೆ ಸತಾಯಿಸಿದ ಹಿರಣ್ಣ, ಶಿವರಾಜ, ಉಮನಾಥ ಅವರಲ್ಲಿ ಹಣ ನೀಡಲು ಸಾಧ್ಯವಿಲ್ಲ ಠಾಣೆಗೆ ಬರುವುದಾಗಿ ತಿಳಿಸಿದ್ದಾರೆ. ನಂತರ ತಡರಾತ್ರಿ ವೇಳೆ ರವಿರಾಜ್ ಅವರ ಮೊಬೈಲಿಗೆ ಕರೆ ಮಾಡಿ ಬೈಕ್ ಕೊಂಡೊಯ್ಯುವಂತೆ ಸೂಚಿಸಿದ್ದಾರೆ. ಮೂವರು ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ರವಿರಾಜ್ ದೂರು ದಾಖಲಿಸಿದ್ದಾರೆ.
