Site icon Ullalavani

ಕಣಚೂರು ಪಬ್ಲಿಕ್ ಸ್ಕೂಲ್‌ನಲ್ಲಿ ‘ಗೋಲ್ ರಶ್–2K26’ ಹ್ಯಾಂಡ್‌ಬಾಲ್ ಪಂದ್ಯಾವಳಿ ಯಶಸ್ವಿ

ದೇರಳಕಟ್ಟೆ, ನ. 5: ಕಣಚೂರು ಪಬ್ಲಿಕ್ ಸ್ಕೂಲ್, ದೇರಳಕಟ್ಟೆ ಇದರ ಆಶ್ರಯದಲ್ಲಿ ಎಐಸಿಎಸ್ ಅಂತರ ಶಾಲಾ ಹ್ಯಾಂಡ್‌ಬಾಲ್ ಪಂದ್ಯಾವಳಿ ‘ಗೋಲ್ ರಶ್–2K26’ ನವೆಂಬರ್ 5ರಂದು ಶಾಲಾ ಮೈದಾನದಲ್ಲಿ ನಡೆಯಿತು. ಹಿರಿಯ ಹಾಗೂ ಕಿರಿಯ ವಿಭಾಗಗಳ ಬಾಲಕ ಮತ್ತು ಬಾಲಕಿಯರ ತಂಡಗಳು ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡವು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತ, ಭಾರತ ಸರ್ಕಾರದ ಅಂಚೆ ಇಲಾಖೆಯ ಅಂಚೆ ಸಹಾಯಕ ನಿತಿನ್ ಪೂಜಾರಿ ಅವರು, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಸೋಲಿನಿಂದ ಎದೆಗುಂದದೆ ನಿರಂತರ ಪ್ರಯತ್ನ ಮಾಡಬೇಕು. ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಿ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಸ್ಪರ್ಧೆಗೆ ಹೆಚ್ಚಿನ ಸಿದ್ಧತೆಯೊಂದಿಗೆ ಮರಳಬೇಕು. ಗೆಲುವು ಮತ್ತು ಸೋಲು ಎರಡನ್ನೂ ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣವನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಣಚೂರು ಪಬ್ಲಿಕ್ ಸ್ಕೂಲ್‌ನ ಸಂಚಾಲಕ ಅಬ್ದುಲ್ ರಹಿಮಾನ್ ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು, ಛಲ ಹಾಗೂ ಕ್ರೀಡಾ ಮನೋಭಾವವನ್ನು ಬೆಳೆಸುತ್ತದೆ. ಸೋಲನ್ನು ಕಲಿಕೆಯ ಅವಕಾಶವಾಗಿ ಸ್ವೀಕರಿಸಿ ನಿರಂತರ ಪ್ರಯತ್ನದ ಮೂಲಕ ಯಶಸ್ಸಿನತ್ತ ಸಾಗಬೇಕು ಎಂದು ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡೀನ್ ಡಾ. ಶಹನವಾಜ್ ಮಣಿಪಾಡಿ, ಕಣಚೂರು ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್‌ನ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ರೋಹನ್ ಮೊನಿಸ್, ಕಣಚೂರು ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ. ರಾಜೀವ್ ಕುಮಾರ್, ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಸೈನ್ಸಸ್‌ನ ಪ್ರಾಂಶುಪಾಲ ಪ್ರೊ. ಇಕ್ಬಾಲ್ ಅಹಮದ್ ಯು.ಟಿ., ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಬಿ.ಎಂ., ಕಣಚೂರು ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಕ್ಯಾರೆನ್ ಟ್ರೆಸ್ಸಿಲ್ಲಾ ಡಿಸೋಜ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಪ್ರಾಂಶುಪಾಲೆ ಲಿನೆಟ್ ಡಿಸೋಜ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭವನ್ನು ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಟ್ರಸ್ಟಿ ಉಮಯ್ಯ ಬಾನು ನೆರವೇರಿಸಿದರು. ಈ ಸಂದರ್ಭದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿವಿಧ ಶಾಲೆಗಳ ತಂಡಗಳ ಸಾಧನೆಯನ್ನು ಗುರುತಿಸಿ, ವಿಜೇತ ತಂಡಗಳಿಗೆ ಹಾಗೂ ಅತ್ಯುತ್ತಮ ವೈಯಕ್ತಿಕ ಪ್ರದರ್ಶನ ನೀಡಿದ ಆಟಗಾರರಿಗೆ ಬಹುಮಾನ ಮತ್ತು ಪ್ರಶಸ್ತಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಸೌಮ್ಯ ಸುವರ್ಣ ಮತ್ತು ಲವೀನಾ ಜೊವಿಟಾ ಕ್ರಾಸ್ತಾ ನಿರೂಪಿಸಿದರು. ಸರಿತಾ ಡಿಸೋಜ ಬಹುಮಾನ ವಿತರಣೆಯ ಘೋಷಣೆ ನೆರವೇರಿಸಿದರು. ಐವಿ ಡಿಸೋಜ ಹಾಗೂ ಜುವೈರಾ ಮುನವ್ವರಾ ವಂದನಾರ್ಪಣೆ ಸಲ್ಲಿಸಿದರು. ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡ ಈ ಪಂದ್ಯಾವಳಿಯು ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ತಂಡದ ಒಗ್ಗಟ್ಟು, ಶಿಸ್ತು ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.

Exit mobile version