ಉಳ್ಳಾಲ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳೇ ಆರ್ಥಿಕ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದ್ದು, ಸರಕಾರದ ಬೊಕ್ಕಸ ಖಾಲಿಯಾಗಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳ ಫಲಾನುಭವಿಗಳಿಗೆ ಸಕಾಲದಲ್ಲಿ ಹಣ ಪಾವತಿಯಾಗುತ್ತಿಲ್ಲ. ಹಲವು ಕುಟುಂಬಗಳ ರೇಷನ್ ಕಾರ್ಡ್ಗಳನ್ನೂ ರದ್ದುಗೊಳಿಸಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಆರೋಪಿಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಜನವಿರೋಧಿ ಆಡಳಿತ ನೀತಿಗಳನ್ನು ಖಂಡಿಸಿ ಬಿಜೆಪಿ ಸೋಮೇಶ್ವರ ಮಹಾಶಕ್ತಿ ಕೇಂದ್ರದ ವತಿಯಿಂದ ಗುರುವಾರ ಸೋಮೇಶ್ವರ ಪುರಸಭೆ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಹಣಕಾಸು ಇಲಾಖೆಯೇ ಆರ್ಥಿಕ ಸಂಪನ್ಮೂಲಗಳ ಕೊರತೆಯಿರುವುದರಿಂದ ಹೊಸ ಯೋಜನೆಗಳನ್ನು ಘೋಷಿಸದಂತೆ ಸೂಚಿಸುತ್ತಿದೆ. ಆದರೆ ಮುಖ್ಯಮಂತ್ರಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಜಿಲ್ಲೆಯ ಅಭಿವೃದ್ಧಿಗೆ 32 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಾದ ಅನುದಾನ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪುರಸಭೆಗಳಿಗೆ ಪ್ರತಿ ವರ್ಷ 10ರಿಂದ 12 ಕೋಟಿ ರೂ. ವಿಶೇಷ ಅನುದಾನ ನೀಡಲಾಗುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ಸರಕಾರ ಪುರಸಭೆಗಳಿಗೆ ಕನಿಷ್ಠ ಅನುದಾನವನ್ನೂ ನೀಡುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಕಾರಣದಿಂದ ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಮಂಗಳೂರು ವಿಧಾನಸಭಾ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಶಾಸಕ ಯು.ಟಿ. ಖಾದರ್ ಅವರು ಉಳ್ಳಾಲ ನಗರ ಪ್ರದೇಶಕ್ಕೆ ಮಾತ್ರ ಅಭಿವೃದ್ಧಿ ಕಾಮಗಾರಿಗಳನ್ನು ಸೀಮಿತಗೊಳಿಸಿ, ಸೋಮೇಶ್ವರ ಪುರಸಭೆ ವ್ಯಾಪ್ತಿಗೆ ಅನುದಾನ ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯ ಅಂಗವಾಗಿ ಕೋಟೆಕಾರು ಬೀರಿ ಜಂಕ್ಷನ್ನಿಂದ ಸೋಮೇಶ್ವರ ಪುರಸಭೆ ಕಚೇರಿವರೆಗೆ ಬಿಜೆಪಿ ಕಾರ್ಯಕರ್ತರು ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಘೋಷಣೆಯೊಂದಿಗೆ ಪಾದಯಾತ್ರೆ ನಡೆಸಿದರು.
ಬಿಜೆಪಿ ಸೋಮೇಶ್ವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಪರ್ಯತ್ತೂರು ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಬಿಜೆಪಿ ಮುಖಂಡ ಸೀತಾರಾಮ ಬಂಗೇರ, ಸೋಮೇಶ್ವರ ಪುರಸಭೆ ಅಧ್ಯಕ್ಷೆ ಕಮಲ, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಶೆಟ್ಟಿ, ಉಳ್ಳಾಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹರಿಯಪ್ಪ ಸಾಲಿಯಾನ್, ಹರೀಶ್ ಅಂಬ್ಲಮೊಗರು, ಸೋಮೇಶ್ವರ ಪುರಸಭೆ ಸದಸ್ಯರಾದ ಮೋಹನ್ ಶೆಟ್ಟಿ ಕುಂಪಲ, ಸ್ವಪ್ನ ಶೆಟ್ಟಿ, ಮನೋಜ್ ಕಟ್ಟೆಮನೆ, ಹರೀಶ್ ಕುಂಪಲ, ಸೋನಾ ಸುಭಾಷಿಣಿ, ಯಶವಂತ್ ಪ್ರಕಾಶ್ ನಗರ, ಜಯ ಪೂಜಾರಿ, ಅಮಿತಾ ಪೂಜಾರಿ, ಜಯಶ್ರೀ ಉಚ್ಚಿಲ್, ಬಿಜೆಪಿ ಮಂಡಲ ಕಾರ್ಯದರ್ಶಿ ರಾಜೇಶ್ ಜಾಲಹಿತ್ಲು, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಧನ್ಯವತಿ ಪೆರಿಬೈಲು, ಮೋಹನ್ ದಾಸ್ ಶೆಟ್ಟಿ ಪೆಲತ್ತಡಿ, ಅರುಣ್ ಉಚ್ಚಿಲ್, ಚರಣ್ ತೊಕ್ಕೊಟ್ಟು, ಚೇತನ್ ಶೆಟ್ಟಿ ಕುಂಪಲ, ದೀಕ್ಷಿತ್ ನಿಸರ್ಗ, ಸೂರಜ್ ಸಾಗರ್ ಕುಂಪಲ, ಗಂಗಾಧರ ಗಟ್ಟಿ ಪಿಲಾರು, ಸವಿತ್ ಉಚ್ಚಿಲ್, ವಸಂತ್ ಕುಲಾಲ್, ರಾಜೇಶ್ ಗಟ್ಟಿ ಉಚ್ಚಿಲ, ನಿಶಾನ್ ಪೂಜಾರಿ, ಜಯರಾಮ್ ಪೂಜಾರಿ, ವರುಣ್ ರಾಜ್, ನೂತನ್ ರಾಜ್, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಮಂಗಳೂರು ಮಂಡಲದ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.