Site icon Ullalavani

ಶಿಕ್ಷಕರ ಪ್ರತಿಷ್ಠಾನದಿಂದ ವಿದ್ಯಾರ್ಥಿಗಳಿಗೆ 1.10 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

ಮಂಗಳೂರು: ಮಂಗಳೂರು ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧೀನ ಸಂಸ್ಥೆಯಾದ ಶಿಕ್ಷಕರ ಪ್ರತಿಷ್ಠಾನ, ಮಂಗಳೂರು ಇದರ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಒಟ್ಟು 1,10,000 ರೂ. ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ವಿನ್ಸೆಂಟ್ ಶ್ಯಾಮುವೆಲ್ ಕರ್ಕಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಕೆ.ಎಂ.ಕೆ. ಮಂಜನಾಡಿ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಡಾ. ಎನ್. ಇಸ್ಮಾಯಿಲ್, ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಹಾಗೂ ರವಿಕಲಾ ಶೆಟ್ಟಿ, ಕೋಶಾಧಿಕಾರಿ ನಾರಾಯಣ ನಾಯಕ್, ನಾಗರಾಜ್, ರಘುನಾಥ ಭಟ್, ರೀಟಾ ಕಾಟಿಪಳ್ಳ, ವನಿತಾ ಸುರೇಶ್, ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರ್ಮಿಳಾ, ಕೆ.ಸಿ. ಲೀಲಾವತಿ, ಜಾಯ್ಸ್ ಹೆನ್ರಿಟ್, ಸಂಧ್ಯಾ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಉದಯಶಂಕರ ನಾಯಕ್ ಸ್ವಾಗತಿಸಿ, ವಂದಿಸಿದರು.

Exit mobile version