Site icon Ullalavani

ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2026

ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ 95 ವರ್ಷಗಳ ಸುದೀರ್ಘ ಇತಿಹಾಸ, ನಿರಂತರ ಸಾಧನೆ ಹಾಗೂ ಸಹಕಾರಿ ನೌಕರರ ಆರ್ಥಿಕ ಸಬಲೀಕರಣಕ್ಕೆ ಸಲ್ಲಿಸಿರುವ ಮಹತ್ವದ ಕೊಡುಗೆಯನ್ನು ಗುರುತಿಸಿ, ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ. ‘ಸಹಕಾರ ರತ್ನ’ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸಂಘಕ್ಕೆ ದೊರೆತ ಈ ಗೌರವವು ಅದರ ಸೇವಾ ಬದ್ಧತೆ ಹಾಗೂ ಸಾಧನೆಗೆ ಸಂದ ಮಹತ್ವದ ಮನ್ನಣೆಯಾಗಿದೆ.

ಮಂಗಳೂರಿನ ನೆಹರೂ ಮೈದಾನದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಎಸ್‌ಸಿಡಿಸಿಸಿ ಬ್ಯಾಂಕಿನ ನಿರೀಕ್ಷಕರಾದ ಎಸ್. ಜಗದೀಶ್ಚಂದ್ರ ಅಂಚನ್ ಅವರು ಸಂಘದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಆರ್ಥಿಕ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ಸ್ಥಾಪನೆಯಾದ ಈ ಸಂಘವು, ಸದಸ್ಯರ ವಿಶ್ವಾಸ ಮತ್ತು ಸಹಕಾರದ ಬಲದಿಂದ ಆರ್ಥಿಕವಾಗಿ ಸದೃಢವಾಗಿ ಬೆಳೆದಿದೆ. ಸಹಕಾರಿ ಕ್ಷೇತ್ರದ ನೌಕರರ ಹಿತಾಸಕ್ತಿಯನ್ನು ಕಾಪಾಡುವ ಜೊತೆಗೆ ಅವರಿಗೆ ಆರ್ಥಿಕ ಭದ್ರತೆ ಹಾಗೂ ಗುಣಮಟ್ಟದ ಸೇವೆ ಒದಗಿಸುವ ಮೂಲಕ ಜಿಲ್ಲೆಯ ಮಾದರಿ ಸಹಕಾರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಸಂಘದ ಅಧ್ಯಕ್ಷ ಎಸ್. ಜಗದೀಶ್ಚಂದ್ರ ಅಂಚನ್ ಅವರ ಸಮರ್ಥ ನಾಯಕತ್ವ, ಆಡಳಿತ ಮಂಡಳಿಯ ನಿರ್ದೇಶಕರ ಸಹಕಾರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದ ನಿರಂತರ ಪರಿಶ್ರಮ ಸಂಘದ ಪ್ರಗತಿಗೆ ಪ್ರಮುಖ ಶಕ್ತಿಯಾಗಿದೆ. ಪರಿಣಾಮಕಾರಿ ಆಡಳಿತ ವ್ಯವಸ್ಥೆ ಹಾಗೂ ಸುಸಂಘಟಿತ ಕಾರ್ಯನಿರ್ವಹಣೆಯಿಂದ ಸಂಘವು ನಿರಂತರ ಲಾಭ ದಾಖಲಿಸುತ್ತಾ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.

ಸಂಘದ ಸಾಧನೆಗೆ ಮತ್ತೊಂದು ಪ್ರಮುಖ ಸಾಕ್ಷಿಯಾಗಿ, ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಸಾಧನಾ ಪ್ರಶಸ್ತಿ’ಯನ್ನು 2017-18ರಿಂದ 2025-26ನೇ ಸಾಲಿನವರೆಗೆ ಸತತ ಒಂಬತ್ತು ವರ್ಷಗಳ ಕಾಲ ಪಡೆದುಕೊಂಡಿದೆ. ನಿರಂತರ ಸಾಧನೆ, ಉತ್ತಮ ಆಡಳಿತ ಮತ್ತು ಸದಸ್ಯರಿಗೆ ಸಲ್ಲಿಸುತ್ತಿರುವ ಗುಣಮಟ್ಟದ ಸೇವೆಗಾಗಿ ದೊರೆತ ಈ ಗೌರವಗಳು ಸಂಘದ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಇದೀಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿರುವುದು ಸಂಘದ 95 ವರ್ಷಗಳ ಸೇವಾ ಪರಂಪರೆಗೆ ಸಂದ ವಿಶೇಷ ಗೌರವವಾಗಿದೆ. ಈ ಸಾಧನೆಯು ಸಂಘದ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ಸಂಘಟಿತ ಪ್ರಯತ್ನ ಮತ್ತು ಒಗ್ಗಟ್ಟಿನ ಕಾರ್ಯನಿರ್ವಹಣೆಯನ್ನು ಪ್ರತಿಬಿಂಬಿಸಿದೆ. ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೊಸ ಪ್ರೇರಣೆ ನೀಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಸಂಘದ ಉಪಾಧ್ಯಕ್ಷ ರಾಘವ ಆರ್.ಉಚ್ಚಿಲ್, ನಿರ್ದೇಶಕರಾದ ಚಂದ್ರಕಲಾ ಕೆ., ಕಿರಣ್ ಕುಮಾರ್ ಶೆಟ್ಟಿ, ನಿಶಿತಾ ಜಯರಾಮ್, ಪ್ರೇಮ್ ರಾಜ್ ಭಂಡಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

Exit mobile version