ಇಂಫಾಲ್: ಮಣಿಪುರದ ನೋನಿ ಜಿಲ್ಲೆಯ ಗ್ರಾಮವೊಂದರಲ್ಲಿ 2 ಎದುರಾಳಿ ನಾಗಾ ಉಗ್ರಗಾಮಿ ಗುಂಪುಗಳ ನಡುವೆ ಬುಧವಾರ ಭೀಕರ ಗುಂಡಿನ ಚಕಮಕಿ ನಡೆದಿದ್ದು, ಈ ಘಟನೆಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ.
ನೋನಿ ಜಿಲ್ಲೆಯ ತಾವೊಡೈಸಿಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಉಗ್ರರ ನಡುವಿನ ಗುಂಡಿನ ಚಕಮಕಿಯಿಂದ ಭಯಗೊಂಡ ನೂರಾರು ಗ್ರಾಮಸ್ಥರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ. ಸಾವನ್ನಪ್ಪಿದ ನಾಲ್ವರಲ್ಲಿ ಮೂವರು ಉಗ್ರರು ‘ಜೆಲಿಯಾಂಗ್ರೊಂಗ್ ಯುನೈಟೆಡ್ ಫ್ರಂಟ್ (ಜೆಂಚುಯಿ ಬಣ) ಅಥವಾ ಜೆಯುಎಫ್‌ಜೆಗೆ ಸೇರಿದವರಾಗಿದ್ದು, ಮತ್ತೊಬ್ಬ ಉಗ್ರ ‘ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲಿಮ್’ ಸಂಘಟನೆಗೆ ಸೇರಿದವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾವೊಡೈಸಿಂಗ್ ಗ್ರಾಮವು ಖೌಪುಮ್ ಕಡೆಗೆ ಹೋಗುವ ಓಲ್ಡ್ ಕಚಾರ್ ರಸ್ತೆಯ ನುಂಗ್ಬಾ ಸಬ್-ಡಿವಿಷನ್‌ಗೆ ಸೇರಿದ್ದು, ರೆಂಗ್‌ಪಾಂಗ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. ಪ್ರದೇಶದ ಮೇಲಿನ ನಿಯಂತ್ರಣ ಮತ್ತು ಪ್ರಭಾವ ಸ್ಥಾಪಿಸುವ ವೈಷಮ್ಯವೇ ಈ ಗೊಂಡಿನ ಚಕಮಕಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.ಈ ಘಟನೆ ನಡೆದ ಸ್ಥಳಕ್ಕೆ ಹೆಚ್ಚಿನ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ. ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶೋಧ ಕಾರ್ಯಾಚರಣೆ ಚುಕುಕುಗೊಳಿಸಲಾಗಿದೆ.