ಉಡುಪಿ: ಭೂಗತ ಪಾತಕಿ ಹೇಮಂತ್ ಪೂಜಾರಿಗೆ ಸಂಬಂಧಿಸಿದ ಸುಲಿಗೆ ಪ್ರಕರಣದಲ್ಲಿ ಪ್ರಮುಖ ಯಶಸ್ಸು ಗಳಿಸಿರುವ ಶಿರ್ವಾ ಠಾಣೆ ಪೊಲೀಸರು, ಉಡುಪಿ ಜಿಲ್ಲೆಯ ಶ್ರೀಮಂತ ಉದ್ಯಮಿಗಳ ಮೊಬೈಲ್ ಸಂಖ್ಯೆಗಳನ್ನು ಪಾತಕಿಗೆ ಪೂರೈಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಮುದರಂಗಡಿಯ ಡೇವಿಡ್ ಡಿಸೋಜ ಅವರ ಕೊಲೆಯ ನಂತರ, ಭೂಗತ ಪಾತಕಿ ಹೇಮಂತ್ ಪೂಜಾರಿ ಪಡುಬಿದ್ರಿ, ಮಣಿಪಾಲ, ಕಾಪು ಮತ್ತು ಶಿರ್ವಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರುವ ಉದ್ಯಮಿಗಳು ಹಾಗೂ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡಿದ್ದ.
ಅಂತರರಾಷ್ಟ್ರೀಯ ಫೋನ್ ಸಂಖ್ಯೆಗಳನ್ನು ಬಳಸಿ ಉದ್ಯಮಿಗಳಿಗೆ ಕರೆ ಮಾಡುತ್ತಿದ್ದ ಆತ, ಕೋಟಿಗಟ್ಟಲೆ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಡುತ್ತಿದ್ದ. ಹಣ ನೀಡದಿದ್ದರೆ ಡೇವಿಡ್ ಡಿಸೋಜ ಅವರನ್ನು ಕೊಲೆ ಮಾಡಿದಂತೆಯೇ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕುತ್ತಿದ್ದ.ಈ ರೀತಿಯ ಬೆದರಿಕೆ ಮತ್ತು ಸುಲಿಗೆ ಕರೆಗಳಿಗೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದವು.ಶಿರ್ವಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ವೇಳೆ, ಸಂತೂರು ಗ್ರಾಮದ ನಿವಾಸಿ ಹರೀಶ್ ಪೂಜಾರಿ (45) ಎಂಬಾತನ ಪಾತ್ರ ಬೆಳಕಿಗೆ ಬಂದಿದೆ. ಈತ ದೂರುದಾರರ ಫೋನ್ ನಂಬರ್ ಸೇರಿದಂತೆ ಉಡುಪಿಯ ಹಲವು ಶ್ರೀಮಂತ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳನ್ನು ಹೇಮಂತ್ ಪೂಜಾರಿಗೆ ನೀಡಿ, ಸುಲಿಗೆ ಯತ್ನಕ್ಕೆ ನೆರವಾಗಿದ್ದ ಎಂಬ ಆರೋಪವಿದೆ.ವಿಚಾರಣೆ ವೇಳೆ, ದೂರುದಾರರ ಮೊಬೈಲ್ ಸಂಖ್ಯೆಯನ್ನು ಹೇಮಂತ್ ಪೂಜಾರಿಗೆ ಹಂಚಿಕೊಂಡಿರುವುದಾಗಿ ಹರೀಶ್ ಪೂಜಾರಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯನ್ನು ನವೆಂಬರ್ 2 ರಂದು ಬಂಧಿಸಲಾಗಿದೆ.ಕೃತ್ಯಕ್ಕೆ ಬಳಸಲಾದ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.