Site icon Ullalavani

ಮಹಿಳೆಯರ ಸ್ವಾವಲಂಬನೆಗೆ ಸೀರೆ ಕುಚ್ಚು ಕೌಶಲ್ಯ ತರಬೇತಿ: 5 ದಿನಗಳ ಉಚಿತ ತರಬೇತಿ ಉದ್ಘಾಟನೆ

ಉಳ್ಳಾಲ: ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕರ್ನಾಟಕ ಟೈಲರ್ಸ್ ಅಸೋಸಿಯೇಶನ್ ಉಳ್ಳಾಲ ಹಾಗೂ ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ಅಂಬಿಕಾರೋಡು ಇವರ ಜಂಟಿ ಆಶ್ರಯದಲ್ಲಿ ಐದು ದಿನಗಳ ಉಚಿತ ಸೀರೆ ಕುಚ್ಚು ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನವೆಂಬರ್ 4ರಂದು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂತಹ ಕೌಶಲ್ಯ ತರಬೇತಿಗಳು ಮಹಿಳೆಯರ ಸ್ವಾವಲಂಬನೆಯ ಕನಸಿಗೆ ಸಹಕಾರಿಯಾಗಲಿವೆ. ತರಬೇತಿ ಪೂರ್ಣಗೊಳಿಸಿದ ಮಹಿಳೆಯರು ಬ್ಯಾಂಕ್ ಸೌಲಭ್ಯಗಳ ಪ್ರಯೋಜನ ಪಡೆದು ಸ್ವಂತ ಉದ್ಯೋಗ ಆರಂಭಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಹೊಲಿಗೆ ಕಲಿತ ಮಹಿಳೆಯರು ಸೀರೆಗೆ ಗೊಂಡೆ ಹಾಕುವ ಕೌಶಲ್ಯವನ್ನೂ ಕಲಿತು ಸ್ವಂತ ಉದ್ಯೋಗ ಆರಂಭಿಸಿದರೆ ಆರ್ಥಿಕವಾಗಿ ಸಬಲರಾಗಬಹುದು. ಇದರಿಂದ ಕುಟುಂಬದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಸಹಕಾರಿಯಾಗಲಿದೆ. ಮಹಿಳೆಯರ ಸ್ವ ಉದ್ಯೋಗ ತರಬೇತಿಗೆ ನಮ್ಮ ಸಂಸ್ಥೆ ಸದಾ ಸಹಕಾರ ನೀಡಲಿದೆ ಎಂದರು.

ಕರ್ನಾಟಕ ಟೈಲರ್ಸ್ ಅಸೋಸಿಯೇಶನ್ ಉಳ್ಳಾಲ ಕ್ಷೇತ್ರ ವಲಯದ ಅಧ್ಯಕ್ಷ ದೇವದಾಸ್ ಮಾತನಾಡಿ, ಇಂತಹ ಕೌಶಲ್ಯ ತರಬೇತಿಗಳು ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಶಕ್ತಿ ನೀಡುತ್ತವೆ. ದೊರೆಯುವ ಸ್ವ ಉದ್ಯೋಗದ ಅವಕಾಶಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತರಬೇತಿಯ ಸಂಪನ್ಮೂಲ ವ್ಯಕ್ತಿ ಗುಲಾಬಿ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸಿರುವ ಮಹಿಳೆಯರು ಉತ್ತಮ ಕೌಶಲ್ಯವನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಇತರರಿಗೂ ಮಾದರಿಯಾಗಬೇಕು ಎಂದು ಹಾರೈಸಿದರು.

ಶಿಬಿರಾರ್ಥಿ ಸುಜಾತಾ ಅತಿಥಿಗಳನ್ನು ಸ್ವಾಗತಿಸಿದರು. ಸರೋಜಾ ಕಾರ್ಯಕ್ರಮ ನಿರೂಪಿಸಿದರು. ಉಳ್ಳಾಲ ತಾಲೂಕಿನ ಗ್ರಾಮೀಣ ಪ್ರದೇಶಗಳ 30 ಮಹಿಳೆಯರು ಈ ಐದು ದಿನಗಳ ಉಚಿತ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

Exit mobile version