Site icon Ullalavani

e-Aasthi ತಾಂತ್ರಿಕ ದೋಷ: ಉಳ್ಳಾಲದಲ್ಲಿ ಆಸ್ತಿ ತಿದ್ದುಪಡಿ, ಖಾತಾ ಪ್ರಕ್ರಿಯೆ ಸ್ಥಗಿತ – ನಾಲ್ಕು ತಿಂಗಳಿಂದ ಸಾರ್ವಜನಿಕರ ಅರ್ಜಿಗಳು ಬಾಕಿ!

ಮಂಗಳೂರು:ಸಾರ್ವಜನಿಕರಿಗೆ ಸುಲಭವಾಗಿ ಆಸ್ತಿ ದಾಖಲೆಗಳ ತಿದ್ದುಪಡಿ ಹಾಗೂ ಖಾತಾ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ e-Aasthi ಡಿಜಿಟಲ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಆಸ್ತಿ ದಾಖಲೆಗಳ ತಿದ್ದುಪಡಿ ಹಾಗೂ ಖಾತಾ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಸುಮಾರು ನಾಲ್ಕು ತಿಂಗಳು ಕಳೆದಿದ್ದರೂ, ಹಲವು ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಬಾಕಿ ಉಳಿದಿವೆ ಎಂಬುದು ಸಾರ್ವಜನಿಕರ ದೂರಾಗಿದೆ.

ಈ ಕುರಿತು‌ ಉಳ್ಳಾಲವಾಣಿ ಉಳ್ಳಾಲ ನಗರಸಭೆಯ ಆಯುಕ್ತರನ್ನು ವಿಚಾರಿಸಿದಾಗ, e-Aasthi ತಂತ್ರಾಂಶದ ಸರ್ವರ್ ಮತ್ತು ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ದೋಷಗಳಿದ್ದು, ಆಸ್ತಿ ತಿದ್ದುಪಡಿಗೆ ನಿಗದಿಪಡಿಸಿರುವ ಮಿತಿಯನ್ನು ಈಗಾಗಲೇ ಮೀರಿರುವುದರಿಂದ ಮುಂದಿನ ತಿದ್ದುಪಡಿ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಪೌರಾಡಳಿತ ನಿರ್ದೇಶನಾಲಯದ (DMA) ನಿರ್ದೇಶಕರು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ e-Aasthi ಪೋರ್ಟಲ್‌ನಲ್ಲಿ ಕಾಣಿಸಿಕೊಂಡಿರುವ ದೋಷದ ಸ್ಕ್ರೀನ್‌ಶಾಟ್ ಕೂಡ ಮನವಿಯೊಂದಿಗೆ ಲಗತ್ತಿಸಲಾಗಿದೆ. ಪೋರ್ಟಲ್‌ನಲ್ಲಿ “You have already crossed the limit of property corrections allowed” ಎಂಬ ಸಂದೇಶ ಕಾಣಿಸುತ್ತಿದ್ದು, ಅನುಮೋದಿತ ಆಸ್ತಿಗಳ ಸಂಖ್ಯೆ 11,856 ಮತ್ತು ತಿದ್ದುಪಡಿ ಮಾಡಲಾದ ಆಸ್ತಿಗಳ ಸಂಖ್ಯೆ 1,186 ಎಂದು ತೋರಿಸುತ್ತಿದೆ.

ಆಸ್ತಿ ತಿದ್ದುಪಡಿಗೆ ಈ ಮಿತಿಯನ್ನು ಯಾವ ಆಧಾರದ ಮೇಲೆ ನಿಗದಿಪಡಿಸಲಾಗಿದೆ? ಈ ಮಿತಿಯನ್ನು ಹೆಚ್ಚಿಸಲು ಅಥವಾ ತಾಂತ್ರಿಕ ದೋಷವನ್ನು ಸರಿಪಡಿಸಲು ಸರ್ಕಾರದ ಮಟ್ಟದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ? ಎಂಬ ಪ್ರಶ್ನೆಗಳನ್ನು ಮನವಿಯಲ್ಲಿ ಎತ್ತಲಾಗಿದೆ.

ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

e-Aasthi ತಂತ್ರಾಂಶದ ಸರ್ವರ್ ಮತ್ತು ಸಾಫ್ಟ್‌ವೇರ್ ದೋಷಗಳ ಕುರಿತು ಪೌರಾಡಳಿತ ನಿರ್ದೇಶನಾಲಯದ ಮೂಲಕ ತಕ್ಷಣ ತಾಂತ್ರಿಕ ಪರಿಶೀಲನೆ ನಡೆಸಬೇಕು. ಆಸ್ತಿ ತಿದ್ದುಪಡಿ ಮಿತಿಯನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಹೆಚ್ಚಿಸಬೇಕು ಅಥವಾ ಪರ್ಯಾಯ ತಾಂತ್ರಿಕ ವ್ಯವಸ್ಥೆ ಕಲ್ಪಿಸಬೇಕು. ಉಳ್ಳಾಲ ನಗರಸಭೆಯಲ್ಲಿ ನಾಲ್ಕು ತಿಂಗಳಿಂದ ಬಾಕಿ ಉಳಿದಿರುವ ಅರ್ಜಿಗಳನ್ನು ನಿಯಮಾನುಸಾರ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದರ ಜೊತೆಗೆ ರಾಜ್ಯದ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳಿವೆಯೇ ಎಂಬುದನ್ನು ಪರಿಶೀಲಿಸಿ, ಜಿಲ್ಲಾವಾರು ಮತ್ತು ನಗರಸಭಾವಾರು ಬಾಕಿ ಅರ್ಜಿಗಳ ವಿವರ ಸಂಗ್ರಹಿಸಬೇಕು. ತಂತ್ರಾಂಶ ನಿರ್ವಹಣೆಗೆ ಜವಾಬ್ದಾರರಾಗಿರುವ ತಾಂತ್ರಿಕ ಸಂಸ್ಥೆ ಹಾಗೂ ಅಧಿಕಾರಿಗಳಿಂದ ವರದಿ ಪಡೆದು, ಸಮಸ್ಯೆ ಪರಿಹಾರಕ್ಕೆ ಕಾಲಮಿತಿ ನಿಗದಿಪಡಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.

ಅರ್ಜಿಗಳ ಪ್ರಸ್ತುತ ಸ್ಥಿತಿ, ವಿಳಂಬಕ್ಕೆ ಕಾರಣ ಮತ್ತು ವಿಲೇವಾರಿಗೆ ನಿರೀಕ್ಷಿತ ಕಾಲಮಿತಿಯನ್ನು ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ತಿಳಿಸುವ ವ್ಯವಸ್ಥೆ ಕಲ್ಪಿಸಬೇಕು. ತಾಂತ್ರಿಕ ದೋಷದಿಂದಾಗಿ ಸಾರ್ವಜನಿಕರು ಪದೇಪದೇ ನಗರಸಭೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಡಿಜಿಟಲ್ ಸೇವೆ ಹೆಸರಿನಲ್ಲಿ ಸಾರ್ವಜನಿಕರು ತಿಂಗಳುಗಟ್ಟಲೆ ಕಾಯುವಂತಾಗಬಾರದು!

ಸರ್ಕಾರ ಡಿಜಿಟಲ್ ಸೇವೆಗಳನ್ನು ಜಾರಿಗೊಳಿಸುವುದು ಸ್ವಾಗತಾರ್ಹ. ಆದರೆ ತಂತ್ರಾಂಶದ ತಾಂತ್ರಿಕ ದೋಷ ಅಥವಾ ಸಾಫ್ಟ್‌ವೇರ್ ಮಿತಿಯ ಕಾರಣದಿಂದ ಸಾರ್ವಜನಿಕರ ಕಾನೂನುಬದ್ಧ ಆಸ್ತಿ ದಾಖಲೆಗಳ ತಿದ್ದುಪಡಿ ಮತ್ತು ಖಾತಾ ಸೇವೆಗಳು ಸ್ಥಗಿತಗೊಳ್ಳುವುದು ಗಂಭೀರ ವಿಚಾರವಾಗಿದೆ. ತಂತ್ರಾಂಶದ ನಿರ್ವಹಣೆ ಸರ್ಕಾರದ ಜವಾಬ್ದಾರಿಯಾಗಿದ್ದು, ಅದರ ವೈಫಲ್ಯದ ಹೊರೆ ಸಾರ್ವಜನಿಕರ ಮೇಲೆ ಬೀಳಬಾರದು ಎಂಬ ಅಭಿಪ್ರಾಯ ಮನವಿಯಲ್ಲಿ ವ್ಯಕ್ತವಾಗಿದೆ.

ಈ ಮನವಿಯ ಪ್ರತಿಗಳನ್ನು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಉಳ್ಳಾಲ ನಗರಸಭೆಯ ಆಯುಕ್ತರಿಗೆ ಕಳುಹಿಸಿ, ಆಡಳಿತಾತ್ಮಕ ಮತ್ತು ತಾಂತ್ರಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಸಂಬಂಧಪಟ್ಟ ಇಲಾಖೆಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಬಾಕಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದರ ಜೊತೆಗೆ e-Aasthi ತಂತ್ರಾಂಶದ ಸಮಸ್ಯೆಗೆ ರಾಜ್ಯಮಟ್ಟದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Exit mobile version