ಕೊಣಾಜೆ: ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರಿಗೆ ಸರಕಾರಿ ಜಾಗವನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಪಂಚಾಯತ್ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಡ್ಕರೆ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಎಂ. ಸಿರಾಜ್ ಅಡ್ಕರೆ ಆಗ್ರಹಿಸಿದ್ದಾರೆ.
ಇಂದು ನಡೆದ ಕೊಣಾಜೆ ಗ್ರಾಮ ಪಂಚಾಯತ್ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಪಂಚಾಯತ್ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗ ಹಾಗೂ ಅತಿಕ್ರಮಣಗೊಂಡಿರುವ ಸರಕಾರಿ ಜಾಗಗಳನ್ನು ಗುರುತಿಸಿ, ನಿವೇಶನ ರಹಿತರಿಗೆ ಸರಕಾರದ ವಸತಿ ಇಲಾಖೆಯ ಯೋಜನೆಯಾದ ‘ಕರ್ನಾಟಕ ಉಚಿತ ನಿವೇಶನ ಹಂಚಿಕೆ ಯೋಜನೆ–2026’ ರಂತೆ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಅಡ್ಕರೆ ಪಡ್ಪು ಪ್ರದೇಶದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಕಾಟವನ್ನು ನಿಯಂತ್ರಿಸಲು ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಪ್ರದೇಶದಲ್ಲಿನ ಇತರ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಪಂಚಾಯತ್ ಅಧಿಕಾರಿಗಳನ್ನು ಆಗ್ರಹಿಸಿದರು.