ಬಂಟ್ವಾಳ: ಪಾಣೆಮಂಗಳೂರಿನ ನೆಹರೂ ನಗರ ಅಂಡರ್‌ಪಾಸ್ ಬಳಿ ಮಾದಕ ದ್ರವ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಯುವಕನೊಬ್ಬನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆ ಪರಾರಿಯಾಗಿದ್ದಾನೆ.
ಬಂಧಿತ ಯುವಕನನ್ನು ಉಳ್ಳಾಲ ತಾಲೂಕಿನ ಬೋಳಿಯಾರ್ ನಿವಾಸಿ ಮಹಮ್ಮದ್ ನಾಸೀರ್ (29) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, 1985 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 30 ರಂದು ರಾತ್ರಿ 9.15 ರ ಸುಮಾರಿಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ (ಪಿಎಸ್‌ಐ) ಸಂದೀಪ್ ಕುಮಾರ್ ಶೆಟ್ಟಿ ಅವರು ಸಿಬ್ಬಂದಿಯೊಂದಿಗೆ ಗಸ್ತು ತಿರುಗುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಗಸ್ತಿನ ವೇಳೆಯಲ್ಲಿ, ನೆಹರೂ ನಗರ ಅಂಡರ್‌ಪಾಸ್ ಬಳಿ ಇಬ್ಬರು ವ್ಯಕ್ತಿಗಳು ಮಾದಕ ದ್ರವ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿದೆ. ಆದರೆ ಪೊಲೀಸರನ್ನು ಕಂಡು ಇಬ್ಬರಲ್ಲಿ ಒಬ್ಬ ಪರಾರಿಯಾಗಿದ್ದು, ಮತ್ತೊಬ್ಬನನ್ನು ತಡೆದು ವಿಚಾರಣೆ ನಡೆಸಲಾಗಿದೆ.ವಿಚಾರಣೆ ವೇಳೆ ನಸೀರ್ ಮಾದಕ ದ್ರವ್ಯ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನ ವಶದಲ್ಲಿದ್ದ ಮೊಬೈಲ್ ಫೋನ್ ಮತ್ತು ಡ್ರಗ್ಸ್ ಸೇವನೆಗೆ ಬಳಸುತ್ತಿದ್ದ ಗಾಜಿನ ಟ್ಯೂಬ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ವ್ಯಕ್ತಿಯನ್ನು ನೆಹರೂ ನಗರ ನಿವಾಸಿ ಸಿದ್ದೀಕ್ ಎಂದು ಗುರುತಿಸಲಾಗಿದೆ.ಬಳಿಕ ನಸೀರ್‌ನನ್ನು ವೈದ್ಯಕೀಯ ಪರೀಕ್ಷೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಕ್ಟೋಬರ್ 31 ರಂದು ಬಂದ ಮೂತ್ರ ಪರೀಕ್ಷಾ ವರದಿಯಲ್ಲಿ ಆತನ ದೇಹದಲ್ಲಿ ‘ಆಂಫಿಟಮೈನ್’ ಮಾದಕ ದ್ರವ್ಯದ ಅಂಶ ಇರುವುದು ದೃಢಪಟ್ಟಿದೆ.ಮಾದಕ ದ್ರವ್ಯ ಸೇವಿಸಿರುವುದು ವೈದ್ಯಕೀಯವಾಗಿ ದೃಢಪಟ್ಟ ಹಿನ್ನೆಲೆಯಲ್ಲಿ ನಸೀರ್ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.