ಕಾಸರಗೋಡು ಜಿಲ್ಲೆಯ ಸಮುದ್ರ ಪ್ರದೇಶದಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಉಳ್ಳಾಲ ಮೂಲದ ಟ್ರಾಲರ್ ದೋಣಿಯನ್ನು ಕೇರಳ ಮೀನುಗಾರಿಕೆ ಇಲಾಖೆ ವಶಪಡಿಸಿಕೊಂಡಿದೆ.
‘ಸಮೃದ್ಧಿ’ ಹೆಸರಿನ ಈ ದೋಣಿ ಮಂಜೇಶ್ವರ ಕರಾವಳಿಯಿಂದ 12 ನಾಟಿಕಲ್ ಮೈಲು ವ್ಯಾಪ್ತಿಯೊಳಗೆ ಮೀನುಗಾರಿಕೆ ನಡೆಸುತ್ತಿದ್ದಾಗ ಗುರುವಾರ ರಾತ್ರಿ ಅಧಿಕಾರಿಗಳ ಬಲೆಗೆ ಬಿದ್ದಿದೆ. ಮೀನುಗಾರಿಕೆ ಇಲಾಖೆ ಮತ್ತು ಸಾಗರ ಜಾರಿ ವಿಭಾಗದ ಜಂಟಿ ತಂಡ ಕಾರ್ಯಾಚರಣೆ ನಡೆಸಿ ದೋಣಿಯನ್ನು ವಶಕ್ಕೆ ಪಡೆದಿದೆ.
ದೋಣಿ ಮಾಲೀಕರಿಗೆ 2.5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ದೋಣಿಯಲ್ಲಿದ್ದ ಮೀನುಗಳನ್ನು 75 ಸಾವಿರ ರೂಪಾಯಿಗೆ ಹರಾಜು ಮಾಡಲಾಗಿದೆ.
ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಕರ್ನಾಟಕ ಮೂಲದ ನಾಲ್ಕು ಟ್ರಾಲರ್ ದೋಣಿಗಳ ವಿರುದ್ಧ ಕೇರಳ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ‘ಅಲಿಸಾ’, ‘ಏಕಾಂಶ’ ಮತ್ತು ‘ದಿಶಾ’ ದೋಣಿಗಳಿಗೂ ತಲಾ 2.5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಕೇರಳದ 12 ನಾಟಿಕಲ್ ಮೈಲು ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸಲು ಇತರ ರಾಜ್ಯಗಳ ಯಾಂತ್ರೀಕೃತ ದೋಣಿಗಳು ವಿಶೇಷ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸುವ ದೋಣಿಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.