Site icon Ullalavani

ಮಂಗಳೂರು: ‘ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಹೋರಾಟ’- ಬಹುಭಾಷಾ ನಟ ಪ್ರಕಾಶ್ ರಾಜ್

ಮಂಗಳೂರು, ಅ.31 : ಮತದಾನದ ಹಕ್ಕು ಕಸಿಯುವ ಎಸ್ ಐಆರ್ ವಿರುದ್ಧ ಮಾತ್ರವಲ್ಲ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಹಾಗೂ ಆರೆಸ್ಸೆಸ್ ಪ್ರೇರಿತ ಸರಕಾರವನ್ನು ಉರುಳಿಸಲು ನಡೆಯುತ್ತಿರುವ ಹೋರಾಟ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್  ತಿರುಗೇಟು ನೀಡಿದ್ದಾರೆ.

ಎಸ್ ಐಆರ್ ವಿರುದ್ಧ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಒತ್ತಾಯಿಸಿ ಜಾತ್ಯತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಶನಿವಾರ ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ನಡೆದ ‘ಜನತಾ ನಡಿಗೆ’ ಎಂಬ ಬೃಹತ್ ಸಾರ್ವಜನಿಕ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ರಾಜ್, ಬಿಜೆಪಿ ಸರ್ಕಾರವನ್ನು ಸೋಲಿಸುವುದು ಈ ಚಳವಳಿಯ ಉದ್ದೇಶವಾಗಿದೆ, ಇದು ಆರ್‌ಎಸ್‌ಎಸ್‌ನಿಂದ ಪ್ರೇರಿತವಾಗಿದೆ ಎಂದು ಅವರು ಆರೋಪಿಸಿದರು.ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಯು ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಪ್ರಾರಂಭವಾಗಿ ಮಂಗಳೂರಿನ ಕ್ಲಾಕ್ ಟವರ್ ಕಡೆಗೆ ಸಾಗಿತು. ಪ್ರತಿಭಟನಾಕಾರರು SIR ಅನ್ನು ಹಿಂತೆಗೆದುಕೊಳ್ಳಬೇಕು, ಮತ ಕಳ್ಳತನವನ್ನು ಕೊನೆಗೊಳಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ವಿರೋಧ ಪಕ್ಷಗಳು ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿವೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ಹೌದು, ನಾವು ನಿಮ್ಮ ಸರ್ಕಾರವನ್ನು ಉರುಳಿಸಲು ಬಂದಿದ್ದೇವೆ. ಆದರೆ ನಾವು ನೇಪಾಳ, ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಅಲ್ಲ. ನಾವು ಪ್ರೀತಿಯಿಂದ, ಅಂಬೇಡ್ಕರ್ ಸಂವಿಧಾನದಲ್ಲಿ ನೀಡಿರುವ ಮತದಾನದ ಹಕ್ಕಿನಿಂದ ಈ ರಂಗ-ಬಿಲ್ಲಾ ಬಿಜೆಪಿ ಸರಕಾರವನ್ನು ಬುಡ ಸಮೇತ ಇಳಿಸಲು ಬಂದಿರುವುದಾಗಿ ಅವರು ಹೇಳಿದರು.ಎಸ್ಐಆರ್ ಬರೀ ಮತ ಕಳ್ಳತನ ಅಲ್ಲ, ಇದು ಇತ್ತೀಚಿನ ಚುನಾವಣೆಗಳಲ್ಲಿ ಹೆಚ್ಚಿಸಿರುವ ಮತಗಳನ್ನು ಅಳಿಸಿ ಹಾಕಲು ತಂದಿರುವುದು. ಅದಕ್ಕಾಗಿ ಅದರ ವಿರುದ್ಧ ಈ ಹೋರಾಟ. ಈ ಹೋರಾಟ ಗೆಲ್ಲುವುದು ಪ್ರಜೆಗಳಿಂದ ಮಾತ್ರ. ಇದು ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೆ ನಾವು ಓಟಿನ ಮಿಷಿನ್ ಮಾತ್ರ. ಮೋದಿಯವರೇ ನೀವು ಅಧಿಕಾರದಲ್ಲಿ ತುಂಬ ದಿನ ಇರುವುದಿಲ್ಲ. ನಿಮ್ಮ ಪಾಪದ ಕೊಡ ತುಂಬಿದೆ ಎಂದು ಪ್ರಕಾಶ್ ರಾಜ್ ಹೇಳಿದರು.ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಪಕ್ಷ ಹಾಗೂ ಸಂಘಟನೆಗಳ ನಾಯಕರಾದ ಪದ್ಮರಾಜ್ ಆರ್., ಎಂ.ಜಿ.ಹೆಗಡೆ, ದಿನೇಶ್ ಹೆಗ್ಡೆ ಉಳೇಪಾಡಿ, ಲಕ್ಷ್ಮೀಶ ದಬ್ಬಲಡ್ಕ, ಅಶ್ರಫ್, ವಿ.ಕುಕ್ಯಾನ್, ಜಯಂತಿ ಬಿ. ಶೆಟ್ಟಿ, ಶೇಖರ್ ವಾಮಂಜೂರು ಇನ್ನಿತರರು ಉಪಸ್ಥಿತರಿದ್ದರು.

Exit mobile version