Site icon Ullalavani

ನಕಲಿ ಇ-ಚಲನ್ ಲಿಂಕ್‌ಗಳ ಮೂಲಕ ಸೈಬರ್ ವಂಚನೆ: ಸಾರ್ವಜನಿಕರಿಗೆ ಮಂಗಳೂರು ಪೊಲೀಸರ ಎಚ್ಚರಿಕೆ

ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇ-ಚಲನ್ ದಂಡ ಪಾವತಿಸುವಂತೆ ನಕಲಿ SMS ಹಾಗೂ ವಾಟ್ಸ್‌ಆ್ಯಪ್ ಸಂದೇಶಗಳನ್ನು ಕಳುಹಿಸಿ ಸಾರ್ವಜನಿಕರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಮಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸೈಬರ್ ವಂಚಕರು ಇ-ಚಲನ್ ದಂಡ ಪಾವತಿಸುವಂತೆ ನಕಲಿ ಲಿಂಕ್‌ಗಳು ಹಾಗೂ APK ಫೈಲ್‌ಗಳನ್ನು ಸಾರ್ವಜನಿಕರ ಮೊಬೈಲ್ ಫೋನ್‌ಗಳಿಗೆ ಕಳುಹಿಸುತ್ತಿದ್ದಾರೆ. ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಅಥವಾ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡುವ ಮೂಲಕ ಸಾರ್ವಜನಿಕರ ಬ್ಯಾಂಕ್ ಖಾತೆಗಳಿಂದ ಹಣವನ್ನು ವಂಚನೆಯಿಂದ ವರ್ಗಾಯಿಸಿಕೊಳ್ಳುತ್ತಿದ್ದಾರೆ.

ಈ ಸಂಬಂಧ 2026ನೇ ಸಾಲಿನಲ್ಲಿ ಈವರೆಗೆ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಸಾರ್ವಜನಿಕರು ಸುಮಾರು 44 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ವಾಹನಗಳ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಪರಿಶೀಲಿಸದೆ ಅಪರಿಚಿತ ಲಿಂಕ್‌ಗಳ ಮೂಲಕ ದಂಡ ಪಾವತಿಸದಂತೆ ಪೊಲೀಸರು ಮನವಿ ಮಾಡಿದ್ದಾರೆ. ವಾಹನದ ಇ-ಚಲನ್ ಬಾಕಿ ಮೊತ್ತವನ್ನು ಸರ್ಕಾರದ ಅಧಿಕೃತ https://echallan.parivahan.nic.in ವೆಬ್‌ಸೈಟ್‌ನಲ್ಲಿ ಮಾತ್ರ ಪರಿಶೀಲಿಸಿ ಪಾವತಿಸಬೇಕು. ಯಾವುದೇ ಸಂದೇಶದ ಬಗ್ಗೆ ಸಂಶಯವಿದ್ದಲ್ಲಿ ಹತ್ತಿರದ ಸಂಚಾರಿ ಪೊಲೀಸ್ ಠಾಣೆ ಅಥವಾ ಸಂಚಾರಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬೇಕು.

ಅಂಚೆ ಮೂಲಕ ಇ-ಚಲನ್ ನೋಟಿಸ್ ಸ್ವೀಕರಿಸಿದಲ್ಲಿ ಮಂಗಳೂರು ಒನ್ ಅಥವಾ ಕರ್ನಾಟಕ ಒನ್‌ನ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ದಂಡ ಪಾವತಿಸಬಹುದು. ಮೊಬೈಲ್‌ಗೆ ಬರುವ ಅಪರಿಚಿತ APK ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡಬಾರದು. ಅಪರಿಚಿತರಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು, ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ವಿವರಗಳು, OTP ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳುವುದರಿಂದ ದೂರವಿರಬೇಕು ಎಂದು ಸೂಚಿಸಲಾಗಿದೆ.

ಅಧಿಕೃತ ವೆಬ್‌ಸೈಟ್‌ನಂತೆ ಕಾಣುವ ನಕಲಿ ವೆಬ್‌ಸೈಟ್‌ಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ವೆಬ್‌ಸೈಟ್‌ನಲ್ಲಿ HTTPS ಇರುವುದರಿಂದ ಮಾತ್ರ ಅದು ಅಧಿಕೃತವೆಂದು ನಂಬಬಾರದು ಎಂದು ಪೊಲೀಸರು ತಿಳಿಸಿದ್ದಾರೆ.

ಇ-ಚಲನ್ ದಂಡ ಪಾವತಿಗೆ ಸಂಬಂಧಿಸಿದಂತೆ ಮೊಬೈಲ್‌ಗೆ ಬರುವ ಸಂದೇಶಗಳ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ ಸಾರ್ವಜನಿಕರು 0824-2220823 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version