Site icon Ullalavani

ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಳ್ಳಾಲದಲ್ಲಿ ಪತ್ರಿಕಾರಂಗದ ಭೀಷ್ಮ ದಿ. ಮನೋಹರ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ

ಉಳ್ಳಾಲ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ (ರಿ.) ವತಿಯಿಂದ ಪತ್ರಿಕಾರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ದಿವಂಗತ ಮನೋಹರ ಪ್ರಸಾದ್ ಅವರ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ನವೆಂಬರ್ 1ರಂದು ಆದಿತ್ಯವಾರ ಸಂಜೆ 3.30ಕ್ಕೆ ಕುತ್ತಾರಿನ ರಾಜರಾಜೇಶ್ವರಿ ದೇವಸ್ಥಾನದ ಎದುರಿರುವ ವೆಜೀ ನೇಷನ್ ಹೋಟೆಲ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಾಗೂ ಸಮಿತಿಯ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ವಹಿಸಲಿದ್ದು, ಕನ್ನಡ ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ ಅವರು ದಿವಂಗತ ಮನೋಹರ ಪ್ರಸಾದ್ ಅವರ ಸಂಸ್ಮರಣೆ ನೆರವೇರಿಸಲಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ, ದೃಶ್ಯ ಮಾಧ್ಯಮ ಕ್ಷೇತ್ರದ ಅಬ್ಬಕ್ಕ ಟಿ.ವಿ. ನಿರ್ದೇಶಕ ಶಶಿಧರ್ ಪೊಯ್ಯತ್ತಬೈಲ್ ಹಾಗೂ ಖ್ಯಾತ ಛಾಯಾಗ್ರಾಹಕ ಡೆಮಟ್ರಿಯಸ್ ಜಿ. ಡಿಸೋಜ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವಸಂತ್ ಎನ್. ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಳ್ಳಾಲ ಅಧ್ಯಕ್ಷ ರಾಜೇಶ್ ಉಳ್ಳಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮಿತಿಯ ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಹೈದರ್ ಪರ್ತಿಪ್ಪಾಡಿ, ಉಪಾಧ್ಯಕ್ಷೆ ದೇವಕಿ ಆರ್. ಉಳ್ಳಾಲ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರಲಿದ್ದಾರೆ.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ಹಾಗೂ ಸರ್ವ ಸದಸ್ಯರು ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಆದರದಿಂದ ಆಹ್ವಾನಿಸಿದ್ದಾರೆ.

Exit mobile version