Site icon Ullalavani

ಉಡುಪಿ: ನವೆಂಬರ್ 3ನೇ ವಾರದಲ್ಲಿ ಬೆಂಗಳೂರು-ಕಾರವಾರ ವಂದೇ ಭಾರತ್ ರೈಲು ಸಂಚಾರ

ಉಡುಪಿ, ಅ.30: ಕರಾವಳಿ ಹಾಗೂ ಮಲೆನಾಡು ಭಾಗದ ರೈಲ್ವೆ ಪ್ರಯಾಣಿಕರ ದೀರ್ಘಕಾಲದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಬಹುನಿರೀಕ್ಷಿತ ಬೆಂಗಳೂರು-ಕಾರವಾರ ಹಾಗೂ ಮಡಗಾಂವ್ ವಂಡೇ ಭಾರತ್ ರೈಲುಗಳ ಸಂಚಾರಕ್ಕೆ ಮುಂಬರುವ ನವೆಂಬರ್ ಮೂರನೇ ವಾರದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚಾಲನೆ ನೀಡಲಿದ್ದಾರೆ. 

ನವದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವರು ಈ ಭರವಸೆ ನೀಡಿದ್ದಾರೆ.

ರೈಲ್ವೆ ಭವನದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿಗೆ ವಂದೇ ಭಾರತ್ ರೈಲು ಸೇವೆ ಘೋಷಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಸಚಿವರಿಗೆ ಶಾಲೂ ಹೊದಿಸಿ, ಹೂಗುಚ್ಛ ನೀಡಿ ಆತ್ಮೀಯವಾಗಿ ಅಭಿನಂದಿಸಿದರು.ಭೇಟಿಯ ವೇಳೆ ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಗಂಭೀರ ವಿಷಯಗಳನ್ನು ಸಂಸದರು ಸಚಿವರ ಗಮನಕ್ಕೆ ತಂದರು. ಕೊಂಕಣ ರೈಲ್ವೆ ನಿಗಮ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನಿಂದಾಗಿ ಮಾರ್ಗದ ದ್ವಿಪಥೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ವಿಳಂಬವಾಗುತ್ತಿದೆ. ಹೀಗಾಗಿ ಕೇರಳ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳೊಂದಿಗೆ ಚರ್ಚಿಸಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕೋಟ ಮನವಿ ಮಾಡಿದರು.

Exit mobile version