ಇಂದು (ಅಕ್ಟೋಬರ್ 29) ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರ ಪುಣ್ಯತಿಥಿ. ಇಡೀ ನಾಡು ಅವರನ್ನು ಸ್ಮರಿಸುತ್ತಿದೆ. 2021ರ ಅಕ್ಟೋಬರ್ 29ರಂದು ತೀವ್ರ ಹೃದಯಾಘಾತದಿಂದ ಅಕಾಲಿಕವಾಗಿ ಕೊನೆಯುಸಿರೆಳೆದ ಪುನೀತ್ ರಾಜ್ಕುಮಾರ್, ಕನ್ನಡಿಗರನ್ನು ಅಗಲಿ ಐದು ವರ್ಷಗಳು ಕಳೆದರೂ ಅವರ ನೆನಪು ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲೂ ಹಸಿರಾಗಿದೆ. ಅವರು ನಿಧನ ಹೊಂದಿದ್ದಾರೆ ಎನ್ನುವ ವಿಷಯವನ್ನು ಅನೇಕರು ಇಂದಿಗೂ ಒಪ್ಪುತ್ತಿಲ್ಲ.
2021ರ ಅಕ್ಟೋಬರ್ 29ರಂದು ನಡೆದಿದ್ದು ಇಡೀ ಕರ್ನಾಟಕದ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಪುನೀತ್ ಅವರು ಬೆಳಿಗ್ಗೆ ಜಿಮ್ ಅಲ್ಲಿ ವರ್ಕೌಟ್ ಮುಗಿಸಿದ ಬಳಿಕ ಅಸಾಧಾರಣವಾಗಿ ಬೆವರು ಹರಿದು ಬರುತ್ತಿತ್ತು. ಇದರಿಂದ ಅನುಮಾನಗೊಂಡು ಅವರು ಫ್ಯಾಮಿಲಿ ಡಾಕ್ಟರ್ ರಮಣ್ ರಾವ್ ಬಳಿ ತೆರಳಿದರು. ಅವರು ದೊಡ್ಡ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ಆದರೆ, ದಾರಿ ಮಧ್ಯೆಯೇ ಅವರು ಕೊನೆಯುಸಿರು ಎಳೆದರು. ಅವರ ಪುಣ್ಯಸ್ಮರಣೆ ದಿನ ಇಡೀ ಕರ್ನಾಟಕ ಅವರನ್ನು ನೆನಪಿಸಿಕೊಳ್ಳುತ್ತಿದೆ.
ಇಂದು ಬೆಳಿಗ್ಗೆಯಿಂದಲೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ಕುಮಾರ್ ಅವರ ಸ್ಮಾರಕಕ್ಕೆ ಅಭಿಮಾನಿಗಳು ಬರುತ್ತಿದ್ದಾರೆ. ಅಪ್ಪು ಸ್ಮಾರಕವನ್ನು ವಿವಿಧ ರೀತಿಯ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಅಭಿಮಾನಿಗಳು ಅಪ್ಪು ನೆನಪಿನಲ್ಲಿ ನಮನ ಸಲ್ಲಿಸಲಿದ್ದಾರೆ. ಕುಟುಂಬಸ್ಥರು ಬೆಳಿಗ್ಗೆ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಸಾಮಾಜಿಕ ಕಾರ್ಯಗಳು
ಕೇವಲ ನಟನಾಗಿ ಮಾತ್ರವಲ್ಲದೆ, ತಮ್ಮ ಕೊಡುಗೈ ಗುಣ ಮತ್ತು ಸಾಮಾಜಿಕ ಕಳಕಳಿಯಿಂದ ಪುನೀತ್ ರಾಜ್ಕುಮಾರ್ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಹಾದಿಯಲ್ಲೇ ಅಭಿಮಾನಿಗಳು ಇಂದು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ವಿವಿಧ ಸಂಘ-ಸಂಸ್ಥೆಗಳು ಹಾಗೂ ಅಭಿಮಾನಿ ಬಳಗಗಳು ರಕ್ತದಾನ ಶಿಬಿರಗಳು, ಉಚಿತ ನೇತ್ರ ತಪಾಸಣೆ ಮತ್ತು ನೇತ್ರದಾನ ನೋಂದಣಿ, ಸಾವಿರಾರು ಜನರಿಗೆ ಅನ್ನಸಂತರ್ಪಣೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ಮತ್ತು ಧನಸಹಾಯ ನೀಡುವ ಮೂಲಕ ಅಪ್ಪು ಅವರ ಸ್ಮರಣೆಯನ್ನು ಸಾರ್ಥಕಗೊಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅಪ್ಪು ಅವರನ್ನು ನೆನಪಿಸಿಕೊಳ್ಳಾಗುತ್ತಿದೆ.