Site icon Ullalavani

ಜಮೀನಿನ ದಾಖಲೆ ಸರಿಪಡಿಸುವ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಯತ್ನ, ಜೀವ ಬೆದರಿಕೆ ಆರೋಪ

ಪುತ್ತೂರು: ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ನಂಬಿಸಿ ವಿದ್ಯಾರ್ಥಿನಿಯೊಬ್ಬಳನ್ನು ಮನೆಗೆ ಕರೆಸಿಕೊಂಡು ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕೆ ಹಾಕಿರುವುದಾಗಿ ಪುತ್ತೂರು ಮೂಲದ ಜಯರಾಮ ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ.

ಮಂಗಳೂರಿನ ವೆನ್‌ಲಾಕ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ, ಪ್ರತಿದಿನ ಕಡಬದಿಂದ ಮಂಗಳೂರಿಗೆ ಪ್ರಯಾಣಿಸಲು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಸಹಪಾಠಿ ಮಮತಾ ಅವರ ಮಂಗಳೂರಿನ ಕೊಟ್ಟಾರಚೌಕಿ ನಿವಾಸದಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸ್ತವ್ಯವಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ತನ್ನ ಮನೆಯ ಜಮೀನಿನ ದಾಖಲೆಗಳಲ್ಲಿ ಸಮಸ್ಯೆಯಿರುವುದಾಗಿ ಮಮತಾ ಅವರಲ್ಲಿ ಹೇಳಿಕೊಂಡಿದ್ದರು. ಇದನ್ನು ಸರಿಪಡಿಸಿಕೊಡಲು ತನ್ನ ಪತಿ ಜಯರಾಮ ಸಹಾಯ ಮಾಡಬಹುದೆಂದು ಮಮತಾ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ, ಜಯರಾಮ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿ, ಆಗಸ್ಟ್ 17ರಂದು ವಿದ್ಯಾರ್ಥಿನಿಯ ಮನೆಯ ದಾಖಲೆಗಳನ್ನು ಪಡೆದುಕೊಂಡು ಪುತ್ತೂರು ಶಾಸಕರ ಕಚೇರಿಗೆ ಕರೆದೊಯ್ದಿದ್ದನು. ಅಂದು ಶಾಸಕರು ಕಚೇರಿಯಲ್ಲಿ ಇಲ್ಲದ ಕಾರಣ ಇಬ್ಬರೂ ವಾಪಸ್ ಮಂಗಳೂರಿಗೆ ತೆರಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ ಆಗಸ್ಟ್ 23ರಂದು ವಿದ್ಯಾರ್ಥಿನಿಗೆ ಕರೆ ಮಾಡಿದ ಜಯರಾಮ, ಮರುದಿನ ಒಬ್ಬಳೇ ಪುತ್ತೂರಿಗೆ ಬರುವಂತೆ ತಿಳಿಸಿದ್ದನು ಎನ್ನಲಾಗಿದೆ. ಅದರಂತೆ ಆಗಸ್ಟ್ 24ರಂದು ವಿದ್ಯಾರ್ಥಿನಿ ಪುತ್ತೂರಿಗೆ ಬಂದಿದ್ದು, ಶಾಸಕರ ಕಚೇರಿಗೆ ತೆರಳಿದಾಗ ಶಾಸಕರು ಅಲ್ಲಿ ಇರಲಿಲ್ಲ. ಬಳಿಕ ಜಯರಾಮ ತನ್ನ ಸ್ಕೂಟಿಯಲ್ಲಿ ವಿದ್ಯಾರ್ಥಿನಿಯನ್ನು ಪುತ್ತೂರು ಕಸಬಾ ಗ್ರಾಮದ ನೆಲ್ಲಿಗುಂಡಿಯಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ.

ಮನೆಯೊಳಗೆ ಯಾರೂ ಇಲ್ಲದ ಸಮಯದಲ್ಲಿ ವಿದ್ಯಾರ್ಥಿನಿಯನ್ನು ಒಳಗೆ ಕರೆದುಕೊಂಡು ಹೋಗಿ, ಬಾಗಿಲು ಹಾಕಿ, ಏಕಾಏಕಿ ಆಕೆಯ ಸೊಂಟ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ವಿದ್ಯಾರ್ಥಿನಿ ಜೋರಾಗಿ ಕೂಗಿಕೊಂಡು ಬಾಗಿಲು ತೆರೆದು ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾಳೆ ಎನ್ನಲಾಗಿದೆ.

ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಜಯರಾಮ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ನಂತರವೂ ಆತ ಪದೇಪದೇ ಕಿರುಕುಳ ನೀಡುತ್ತಿದ್ದು, ತನ್ನ ಬೇಡಿಕೆಗಳಿಗೆ ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದನು ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಯ ಬೆದರಿಕೆಯಿಂದ ಹಾಗೂ ತನ್ನ ಕುಟುಂಬದವರಿಗೆ ತೊಂದರೆಯಾಗಬಹುದೆಂಬ ಭಯದಿಂದ ವಿದ್ಯಾರ್ಥಿನಿ ಈವರೆಗೆ ದೂರು ನೀಡಿರಲಿಲ್ಲ ಎನ್ನಲಾಗಿದೆ. ಇದೀಗ ಮನೆಯವರಿಗೆ ವಿಷಯ ತಿಳಿಸಿ ದೂರು ನೀಡಿದ್ದು, ತನ್ನ ಮಾನಭಂಗಕ್ಕೆ ಯತ್ನಿಸಿ ಜೀವ ಬೆದರಿಕೆ ಹಾಕಿರುವ ಜಯರಾಮನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Exit mobile version