ನವದೆಹಲಿ, ಅಕ್ಟೋಬರ್ 28: ಸುಮ್ಮನೆ ಬೇರೆಯವರ ಮೇಲೆ ಆರೋಪ ಮಾಡುವುದು ಬಿಡಿ, ಸ್ಟಿಂಗ್ನಲ್ಲಿರುವ ಮಹಿಳೆ ಯಾರು ಎಂಬುದರ ತನಿಖೆ ಮಾಡಿ ಎಂದು ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ. 2 ದಿನ ಬಿಟ್ಟು ಬೆಂಗಳೂರಿಗೆ ಬರ್ತೀನಿ ಮಿಸ್ಟರ್ ಪ್ರಿಯಾಂಕ್, ಎಲ್ಲೂ ಹೋಗಲ್ಲ ಬಂದು ನಿಮ್ಮ ಆಟ ಬಯಲು ಮಾಡ್ತೀನಿ . ನಾನು ತಪ್ಪು ಮಾಡದವ, ನಾನ್ಯಾಕೆ ಭಯಪಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಹಿಂದೆ ನಿಮ್ಮ ತಂದೆಯನ್ನು ಸಿಎಂ ಮಾಡಿಲ್ಲ ಎಂಬ ಹಳೇ ದ್ವೇಷ ಇಟ್ಕೊಂಡು ನೀವು ಸಿದ್ದರಾಮಯ್ಯ ವರ್ಚಸ್ಸು ಹಾಳು ಮಾಡ್ತಿದ್ದೀರಿ. ನನ್ನ ಕಾರ್ಯಕರ್ತರನ್ನು ಹಿಡಿದರೆ ಏನೂ ಸಿಗಲ್ಲ. ಮೂಲ ಕಾರಣಿಕರ್ತರನ್ನು ಹುಡುಕಿ, ಟೈಮ್ ಪಾಸ್ ಮಾಡಬೇಡಿ.ಮೂಲ ವ್ಯಕ್ತಿಯನ್ನು ರಾಜಾರೋಷವಾಗಿ ಓಡಾಡುವುದಕ್ಕೆ ಬಿಟ್ಟಿದ್ದೀರಿ. ಯಾರೋ ಒಬ್ಬ ವ್ಯಕ್ತಿ ಕಾನೂನುಬಾಹಿರ ಚಾನೆಲ್ ಇಟ್ಟುಕೊಂಡಿದ್ದಾನೆ. ನನ್ನ ಬಾಯಿ ಮುಚ್ಚಿಸೋಕೆ ಆಗಲ್ಲ ಪ್ರಿಯಾಂಕ್ ಖರ್ಗೆ ಬ್ರದರ್, ನಿಮ್ಮ ಬಾಯಿ ಮುಚ್ಚಿಸುವ ಸಮಯ ಬಂದಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸರು ಎಲ್ಲೂ ಹೋಗಲ್ಲ, ನಮಗೂ ಕಾಲ ಬರುತ್ತೆ’
ಕಾಂಗ್ರೆಸ್‌ನ ನಾಯಕಿಯೊಬ್ಬರು ಸ್ಟಿಂಗ್ ಆಪರೇಷನ್ ಮಾಡಿದ್ದಾರೆ. ಆಕೆಯ ಬಗ್ಗೆ ಪ್ರಿಯಾಂಕ್ ಖರ್ಗೆ ಏಕೆ ತನಿಖೆ ನಡೆಸಿಲ್ಲ. ಸ್ಟಿಂಗ್ ಮಾಡಿದ್ದ ವ್ಯಕ್ತಿ ಈಗಲೂ ರಾಜಾರೋಷವಾಗಿ ಓಡಾಡ್ತಿದ್ದಾರೆ. ನಮ್ಮ ಕಾರ್ಯಕರ್ತನ ಪತ್ನಿಗೆ ಪತಿಯ ಮೊಬೈಲ್ ಪಡೆಯುವ ವಿಚಾರದಲ್ಲಿ ಪೊಲೀಸರು ಕಿರುಕುಳ ನೀಡಿದ್ದಾರೆ. ಕಿರುಕುಳ ನೀಡುವ ಪೊಲೀಸ್ ಅಧಿಕಾರಿಗಳ ಹೆಸರು ಬರೆದಿಟ್ಟುಕೊಳ್ಳಿ. ಪೊಲೀಸರು ಎಲ್ಲೂ ಹೋಗಲ್ಲ, ನಮಗೂ ಕಾಲ ಬರುತ್ತೆ ಎಂದು ಇದೇ ವೇಳೆ ಜೆಡಿಎಸ್ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ ನೀಡಿದ್ದಾರೆ.
‘ದುರಹಂಕಾರದಿಂದ ಪರಿಷತ್ ಚುನಾವಣೆಯಲ್ಲಿ ಸೋತಿದ್ದೀರಿ’
ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಭೇರಿ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿರುವ ಹೆಚ್ಡಿಕೆ, ಪ್ರಧಾನಿ ಮೋದಿ ಸಾಧನೆ ಮತ್ತು ಹೆಚ್‌ಡಿಡಿ ಬಗ್ಗೆ ಒಲವು ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲವಿಗೆ ಅನುಕೂಲವಾಗಿದೆ. ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೆ ವಿಶೇಷವಾದ ಕೃತಜ್ಞತೆಗಳು. ನಿನ್ನೆಯ ಫಲಿತಾಂಶದಿಂದ ನಮಗೆ ಜನಬೆಂಬಲವಿದೆ ಎಂಬ ಸೂಚನೆ ಸಿಕ್ಕಿದೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಸಿಎಂ ಹೇಳಿಕೆಗೆ ಜನ ಉತ್ತರ ನೀಡಿದ್ದಾರೆ. ಸಿಎಂ ಡಿಕೆಶಿ ಅವರ ಕೆಲ ಯೋಜನೆಗಳಾದ ಬಿಡದಿ ಟೌನ್‌ಶಿಪ್, ನೈಸ್ ಯೋಜನೆ, ಕೆಪಿಎಸ್‌ಸಿ ಕರ್ಮಕಾಂಡ ಸೇರಿದಂತೆ ಎಲ್ಲವೂ ಇಂತಹ ಫಲಿತಾಂಶ ಬರಲು ಕಾರಣವಾಗಿದೆ. ಮುಂದೆ ಭ್ರಷ್ಟಾಚಾರದ ಪಕ್ಷ ಬೆಂಬಲಿಸಬಾರದೆಂದು ನಮ್ಮನ್ನ ಗೆಲ್ಲಿಸಿದ್ದಾರೆ. ನಿಮ್ಮ ದುರಹಂಕಾರದಿಂದ ಪರಿಷತ್ ಚುನಾವಣೆಯಲ್ಲಿ ಸೋತಿದ್ದೀರಿ. RSS ವಿರೋಧ ಸೇರಿ ಹಲವು ವಿಚಾರಗಳೇ ನಿಮ್ಮ ಸೋಲಿಗೆ ಕಾರಣ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವರು ಕಿಡಿ ಕಾರಿದ್ದಾರೆ.