Site icon Ullalavani

ತೊಕ್ಕೊಟ್ಟಿನಲ್ಲಿ ಮೂರು ದಿನಗಳ ‘ಸಸ್ಯಸಂಭ್ರಮ’ ದೀಪಾವಳಿ ಮಾರಾಟ ಸಂತೆ

ಉಳ್ಳಾಲ: ರೈತ ಕುಡ್ಲ ಪ್ರತಿಷ್ಠಾನದ ನೇತೃತ್ವದಲ್ಲಿ, ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ (ರಿ.) ಸಹಯೋಗದೊಂದಿಗೆ ‘ಸಸ್ಯಸಂಭ್ರಮ’ ದೀಪಾವಳಿ ಮಾರಾಟ ಸಂತೆ ಆಯೋಜಿಸಲಾಗಿದೆ. ನ. 6, 7 ಮತ್ತು 8ರಂದು ತೊಕ್ಕೊಟ್ಟಿನ ಗಟ್ಟಿ ಸಮಾಜ ಭವನದಲ್ಲಿ ಈ ಮೇಳ ನಡೆಯಲಿದೆ.

ಮೇಳದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿದ್ದು, ಆಹಾರ ಮೇಳವೂ ನಡೆಯಲಿದೆ.

ಸಸ್ಯಸಂಭ್ರಮದ ಪ್ರಮುಖ ಆಕರ್ಷಣೆಗಳಾಗಿ ವೈವಿಧ್ಯಮಯ ಹಣ್ಣಿನ ಗಿಡಗಳು ಹಾಗೂ ಬಗೆಬಗೆಯ ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಇದರೊಂದಿಗೆ ಕರಕುಶಲ ಉತ್ಪನ್ನಗಳ ಪ್ರದರ್ಶನ, ಕೃಷಿ ಸಲಕರಣೆಗಳ ಮಾರಾಟ, ಹಬ್ಬಕ್ಕೆ ಪೂರಕವಾದ ಬಟ್ಟೆಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಅಲ್ಲದೆ, ಕಡಿಮೆ ದರದಲ್ಲಿ ತರಕಾರಿ ಗಿಡಗಳು ಮತ್ತು ಬೀಜಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ. ದೀಪಾವಳಿ ಆಚರಣೆಗೆ ಅಗತ್ಯವಿರುವ ವಸ್ತುಗಳು ಹಾಗೂ ಮಣ್ಣಿನ ಹಣತೆಗಳೂ ಮೇಳದಲ್ಲಿ ಲಭ್ಯವಿರಲಿವೆ.

ಕೃಷಿ, ತೋಟಗಾರಿಕೆ, ಕರಕುಶಲ ಉತ್ಪನ್ನಗಳು ಹಾಗೂ ಹಬ್ಬದ ಖರೀದಿಗೆ ಒಂದೇ ಸೂರಿನಡಿ ಅವಕಾಶ ಕಲ್ಪಿಸುವ ಈ ಸಂತೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.

Exit mobile version