Site icon Ullalavani

ಬಾಳೆಪುಣಿ ಮದ್ರಸದಲ್ಲಿ ಪೋಷಕರ ಸಭೆ ಯಶಸ್ವಿ

ಬಾಳೆಪುಣಿ: ಇಲ್ಲಿನ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸದಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆ ಯಶಸ್ವಿಯಾಗಿ ನಡೆಯಿತು. ಅಕ್ಟೋಬರ್ 27ರ ಮಂಗಳವಾರ ಬೆಳಿಗ್ಗೆ 9:45ಕ್ಕೆ ಆರಂಭಗೊಂಡ ಸಭೆಯು 11:30ಕ್ಕೆ ಸಮಾಪನಗೊಂಡಿತು.

ಮದ್ರಸದ ಸದರ್ ಉಸ್ತಾದ್ ಹಾರಿಸ್ ಹನೀಫಿ ಅಲ್ ಫುರ್ಖಾನಿ ದುಆ ನೆರವೇರಿಸಿದರು. ಸಿದ್ದೀಕ್ ಸಅದಿ ಸ್ವಾಗತಿಸಿದರು. ಮುಹಮ್ಮದ್ ಮದನಿ ಸಭೆಯನ್ನು ಉದ್ಘಾಟಿಸಿದರು. ಅಕ್ಬರ್ ಸಾದಿಕ್ ಸಖಾಫಿ ಹಾಗೂ ಸಫ್ವಾನ್ ಸುಲ್ತಾನಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮದ್ರಸದ ನಿಯಮಗಳು, ವಿದ್ಯಾರ್ಥಿಗಳ ಶಿಸ್ತು, ಶೈಕ್ಷಣಿಕ ಪ್ರಗತಿ ಹಾಗೂ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪೋಷಕರ ಜವಾಬ್ದಾರಿಗಳ ಕುರಿತು ಸದರ್ ಉಸ್ತಾದ್ ಹಾರಿಸ್ ಹನೀಫಿ ಅಲ್ ಫುರ್ಖಾನಿ ಸವಿಸ್ತಾರವಾಗಿ ಮಾತನಾಡಿದರು. ಮದ್ರಸ ಮತ್ತು ಪೋಷಕರ ನಡುವಿನ ಉತ್ತಮ ಸಹಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ನೈತಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಸುಮಾರು ಶೇ. 98ರಷ್ಟು ಪೋಷಕರು ಭಾಗವಹಿಸಿದ್ದು, ತಾಯಂದಿರ ಉಪಸ್ಥಿತಿಯೂ ಗಮನಾರ್ಹವಾಗಿತ್ತು. ಪೋಷಕರು ತಮ್ಮ ಮಕ್ಕಳ ಅಂಕಪಟ್ಟಿ ಹಾಗೂ ಪರೀಕ್ಷಾ ಫಲಿತಾಂಶಗಳನ್ನು ಪರಿಶೀಲಿಸಿ ಸಹಿ ಮಾಡಿದರು. ಅಲ್ಲದೆ, ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಜಮಾಅತ್ ಅಧ್ಯಕ್ಷ ಮೊಯ್ದಿನ್ ಹಾಜಿ, ಕಾರ್ಯದರ್ಶಿ ಉಮರ್ ಬಿ.ಎಂ., ಹುಸೈನಾರ್‌ಚ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಗವಹಿಸಿದ ಪೋಷಕರಿಗೆ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ಪೋಷಕರ ಉತ್ತಮ ಸ್ಪಂದನೆ ಮತ್ತು ಸಹಕಾರದೊಂದಿಗೆ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

Exit mobile version