Site icon Ullalavani

ನವೆಂಬರ್ 1ರಂದು ಸುರತ್ಕಲ್ ಬಂಟರ ಭವನದಲ್ಲಿ ರಂಗುರಂಗಿನ ರಂಗೋತ್ಸವ

ಹಿರಿಯ ಕಲಾವಿದ ಲಕ್ಷ್ಮಣ್ ಕುಮಾರ್ ಮಲ್ಲೂರು ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ

ಸುರತ್ಕಲ್: ರಂಗಚಾವಡಿ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಹಾಗೂ ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ (ರಿ.), ಸುರತ್ಕಲ್ ಇವರ ಆಶ್ರಯದಲ್ಲಿ ನವೆಂಬರ್ 1ರಂದು ಭಾನುವಾರ ಸಂಜೆ 4.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ‘ರಂಗು ರಂಗಿನ ರಂಗೋತ್ಸವ’ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ 2026ನೇ ಸಾಲಿನ ರಂಗಚಾವಡಿ ಪ್ರಶಸ್ತಿಯನ್ನು ಹಿರಿಯ ಕಲಾವಿದ ಲಕ್ಷ್ಮಣ್ ಕುಮಾರ್ ಮಲ್ಲೂರು ಅವರಿಗೆ ಪ್ರದಾನ ಮಾಡಲಾಗುವುದು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮುಂಬೈ ವಿ.ಕೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್. ವಸಂತ ಬೆರ್ನಾಡ್, ಚಲನಚಿತ್ರ ನಿರ್ಮಾಪಕ ಡಾ. ಸಂಜೀವ ದಂಡೆಕೇರಿ, ಕಟೀಲು ಶ್ರೀ ಡೆವಲಪರ್ಸ್‌ನ ಆಡಳಿತ ನಿರ್ದೇಶಕ ಗಿರೀಶ್ ಎಂ. ಶೆಟ್ಟಿ ಕಟೀಲು, ದಿವ್ಯರೂಪ ಕನ್‌ಸ್ಟ್ರಕ್ಷನ್ ಪ್ರೈ. ಲಿ. ಮಾಲಕ ಯಾದವ ಕೋಟ್ಯಾನ್ ಪೆರ್ಮುದೆ, ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಸಿ.ಎ. ಸುನೀಲ್ ಭಂಡಾರಿ (ಬೆಂಗಳೂರು), ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಯಥಾರ್ಥ್ ಸೋಶಿಯಲ್‌ನ ಸ್ಥಾಪಕಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ ಹಾಗೂ ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ರಮೇಶ್ ಶೆಟ್ಟಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಸ್ಟಾರ್ ವಾಯ್ಸ್ ಮೆಲೊಡೀಸ್ ತಂಡದಿಂದ ಸಂಗೀತ ಗಾನಸುಧೆ ನಡೆಯಲಿದೆ. ಬಳಿಕ ಕಲಾ ಸಂಗಮದ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ನೂತನ ನಾಟಕ ಕೃತಿ ‘ಶ್ರೀಮತಿ ಸತ್ಯಭಾಮ’ ಉಚಿತವಾಗಿ ಪ್ರದರ್ಶನಗೊಳ್ಳಲಿದೆ.

ಕಲೆ, ಸಾಹಿತ್ಯ ಮತ್ತು ಸಂಗೀತದ ಸಮ್ಮಿಲನವಾಗಿರುವ ಈ ರಂಗೋತ್ಸವವು ಕಲಾಸಕ್ತರಿಗೆ ಮನರಂಜನೆಯ ರಸದೌತಣ ನೀಡಲಿದೆ.

Exit mobile version