Site icon Ullalavani

ಮಾಜಿ ಸಿಎಂ ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಪ್ರಕರಣ: ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ಶೋಕಾಸ್ ನೋಟಿಸ್..!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ನಡೆಸಲಾದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರ ಕೈವಾಡವಿದೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ ಬೆನ್ನಲ್ಲೇ, ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಕಾಂಗ್ರೆಸ್ ಮಹಿಳಾ ನಾಯಕಿ ಕೃಪಾ ಆಳ್ವಾ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಸ್ಟಿಂಗ್ ವಿಡಿಯೋದಲ್ಲಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಕಾಣಿಸಿಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಕೂಡ ಗಂಭೀರ ಆರೋಪ ಮಾಡಿದ್ದರು.

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, “ಇದು ರಾಜಕೀಯ ಸೇಡು ತೀರಿಸಿಕೊಳ್ಳಲು ಕೆಲವರು ಎಸಗಿರುವ ಹೀನ ಕೃತ್ಯವಾಗಿದೆ. ಇಂತಹ ಕೃತ್ಯಗಳು ನಡೆಯಬಾರದು ಎಂದು ನಾನು ನಿರಂತರವಾಗಿ ಹೇಳುತ್ತಾ ಬಂದಿದ್ದೇನೆ. ಈ ಸ್ಟಿಂಗ್ ಆಪರೇಷನ್‌ನಲ್ಲಿ ಕಾಂಗ್ರೆಸ್ ಪಕ್ಷದವರು ಯಾರೇ ಭಾಗಿಯಾಗಿದ್ದರೂ, ವಿಡಿಯೋ ಸಾಕ್ಷ್ಯಾಧಾರಗಳು ಹೊರಬರುತ್ತಿದ್ದಂತೆ ಅವರ ವಿರುದ್ಧ ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದರು.

ಈಗಾಗಲೇ ಕೃಪಾ ಆಳ್ವಾ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಲಾಗಿದ್ದು, ನೋಟಿಸ್‌ಗೆ ನೀಡುವ ಉತ್ತರವನ್ನು ಆಧರಿಸಿ ಮುಂದಿನ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ವಿಡಿಯೋದಲ್ಲಿ ಯಾರಿದ್ದಾರೆ ಮತ್ತು ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಸಮಗ್ರ ತನಿಖೆ ನಡೆಸಲು ಸಿಐಡಿ (CID) ಹಾಗೂ ಸಿಬಿಐ (CBI) ನಂತಹ ಸಂಸ್ಥೆಗಳಿವೆ. ಆ ರೀತಿ ತನಿಖೆಗೆ ಹೋದರೆ ಹಳೆಯ ಪ್ರಕರಣಗಳಿಂದಲೂ ತನಿಖೆ ನಡೆಸಬೇಕಾಗುತ್ತದೆ ಎಂದು ಹೇಳುವ ಮೂಲಕ ಬಿ.ಕೆ. ಹರಿಪ್ರಸಾದ್ ಬಿಜೆಪಿಯ ವಿರುದ್ಧವೂ ವಾಗ್ದಾಳಿ ನಡೆಸಿದರು.

Exit mobile version