ಬಂಟ್ವಾಳ: ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 2007ರಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 139/2007ರ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ತಾಲೂಕಿನ ಮಂಚಿ ನಿವಾಸಿ ಇರ್ಷಾದ್ ಅಲಿಯಾಸ್ ಮಹಮ್ಮದ್ ಇರ್ಷಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಐಪಿಸಿ ಕಲಂ 366, 368, 420, 120 ಮತ್ತು 149ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯು ಕಳೆದ ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸರು, ಅಕ್ಟೋಬರ್ 21ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಆರೋಪಿಯ ಪಾಸ್ಪೋರ್ಟ್ ಅನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.