Site icon Ullalavani

ಕೊಡಗಿನಲ್ಲಿ ಘೋರ ದುರಂತ: ಕೆರೆಗೆ ಬಿದ್ದ ಕಾರು, ಕ್ರೂರ ವಿಧಿಯ ಆಟಕ್ಕೆ ಪುಟ್ಟ ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ಬಲಿ!

ವಿಧಿಯಾಟಕ್ಕೆ ಕೊನೆಯೇ ಇಲ್ಲವೇನೋ… ಮನೆಗೆ ತಲುಪಬೇಕಿದ್ದ ಕುಟುಂಬವೊಂದು ರಸ್ತೆಯಲ್ಲೇ ಜೀವ ಕಳೆದುಕೊಂಡ ಕರುಣಾಜನಕ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಬಳಿ ಸಂಭವಿಸಿದೆ. ಬುಧವಾರ ರಾತ್ರಿ ನಡೆದ ಈ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಜೀವಂತ ಸಮಾಧಿಯಾಗಿದ್ದು, ಇಡೀ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದೆ.

ಸಿದ್ದಾಪುರ ಹೈಸ್ಕೂಲ್ ಪೈಸಾರಿ ನಿವಾಸಿ ವಿಜೇಶ್ (36), ಅವರ ಪತ್ನಿ ಪಮಿತ (34) ಹಾಗೂ ಕೇವಲ ನಾಲ್ಕು ವರ್ಷದ ಮುಗ್ಧ ಕಂದಮ್ಮ ಲಿಯ ಮೃತಪಟ್ಟ ದುರ್ದೈವಿಗಳು. ಸಿದ್ದಾಪುರದಿಂದ ಬಾಣಂಗಾಲ ಗ್ರಾಮದಲ್ಲಿದ್ದ ತಮ್ಮ ಮನೆಗೆ ಸ್ಯಾಂಟ್ರೋ ಕಾರಿನಲ್ಲಿ ಸಂತಸದಿಂದ ತೆರಳುತ್ತಿದ್ದ ಈ ಕುಟುಂಬವನ್ನು ಕಾಲ ಮೃತ್ಯುವಿನ ರೂಪದಲ್ಲಿ ತಡೆದು ನಿಲ್ಲಿಸಿದ್ದಾನೆ. ನಿಯಂತ್ರಣ ತಪ್ಪಿದ ಕಾರು ಪಕ್ಕದಲ್ಲಿದ್ದ ಕೆರೆಗೆ ಉರುಳಿ ಬಿದ್ದಿದ್ದು, ಕತ್ತಲ ರಾತ್ರಿಯಲ್ಲಿ ಸಹಾಯಕ್ಕೆ ಯಾರೂ ಇಲ್ಲದೆ, ನೀರಿನಲ್ಲಿ ಸಿಲುಕಿ ಮೂವರೂ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.

ಗುರುವಾರ ಬೆಳಿಗ್ಗೆ ತೋಟದ ಕಾರ್ಮಿಕರು ಕೆರೆಯಲ್ಲಿ ಕಾರನ್ನು ಕಂಡು ಬೆಚ್ಚಿಬಿದ್ದಾಗ ಈ ಕ್ರೂರ ಸತ್ಯ ಹೊರಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಡಗ ಬಾಣಂಗಾಲ ಗ್ರಾಮದಲ್ಲಿ ನೀರವ ಮೌನ ಮತ್ತು ಶೋಕದ ವಾತಾವರಣ ಆವರಿಸಿದೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಸದ್ಯ ಪೊಲೀಸರು ಕೆರೆಗೆ ಕಾರು ಉರುಳಲು ನಿಖರ ಕಾರಣದ ಬಗ್ಗೆ ತನಿಖೆ ನಡೆಸಿದ್ದಾರೆ.

Exit mobile version