ಮಂಗಳೂರು: ಮಂಗಳೂರು ದಸರಾ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವತಿಯಿಂದ ನಡೆಯಲಿರುವ ದೇವರ ಮೆರವಣಿಗೆ ಹಾಗೂ ಟ್ಯಾಬ್ಲೋಗಳ ಸಂಚಾರದ ಹಿನ್ನೆಲೆಯಲ್ಲಿ ಅಕ್ಟೋಬರ್ 21ರ ಬುಧವಾರ ಸಂಜೆ 4 ಗಂಟೆಯಿಂದ ಅಕ್ಟೋಬರ್ 22ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.
ಕುದ್ರೋಳಿ ದೇವಸ್ಥಾನದ ದ್ವಾರದಿಂದ ಆರಂಭವಾಗುವ ಮೆರವಣಿಗೆಯು ಮಣ್ಣಗುಡ್ಡೆ ಜಂಕ್ಷನ್, ನಾರಾಯಣಗುರು ವೃತ್ತ (ಲೇಡಿಹಿಲ್), ಲಾಲ್ಭಾಗ್, ಬಳ್ಳಾಲ್ಭಾಗ್, ಪಿ.ವಿ.ಎಸ್. ಜಂಕ್ಷನ್, ನವಭಾರತ ವೃತ್ತ, ಸಿಟಿ ಸೆಂಟರ್, ಹಂಪನಕಟ್ಟೆ, ಕೆಬಿ ಕಟ್ಟೆ, ಕಾರ್ ಸ್ಟ್ರೀಟ್ ಹಾಗೂ ನ್ಯೂಚಿತ್ರಾ ಜಂಕ್ಷನ್ ಮೂಲಕ ಸಾಗಿ ಪುನಃ ಕುದ್ರೋಳಿ ದೇವಸ್ಥಾನವನ್ನು ತಲುಪಲಿದೆ.
ಮೆರವಣಿಗೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 21ರಂದು ಮಧ್ಯಾಹ್ನ 2 ಗಂಟೆಯಿಂದಲೇ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಮೆರವಣಿಗೆ ಸಾಗುವ ರಸ್ತೆಗಳನ್ನು ತಪ್ಪಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರಿ ಪೊಲೀಸರು ಸೂಚಿಸಿದ್ದಾರೆ. ಅಲ್ಲದೆ, ಮೆರವಣಿಗೆಯ ಮಾರ್ಗದ ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಮನವಿ ಮಾಡಿದ್ದಾರೆ.
ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳು
ಕೊಟ್ಟಾರ ಚೌಕಿ ಜಂಕ್ಷನ್ನಿಂದ ಲೇಡಿಹಿಲ್ ಮೂಲಕ ಮಂಗಳೂರು ನಗರಕ್ಕೆ ಬರುವ ವಾಹನಗಳು ಕುಂಟಿಕಾನ–ಕೆಪಿಟಿ–ನಂತೂರು ಮಾರ್ಗವಾಗಿ ಸಂಚರಿಸಬೇಕು.
ಬಂಟ್ಸ್ ಹಾಸ್ಟೆಲ್ನಿಂದ ಪಿ.ವಿ.ಎಸ್. ಮೂಲಕ ಎಂ.ಜಿ. ರಸ್ತೆಗೆ ತೆರಳುವ ವಾಹನಗಳು ಬಂಟ್ಸ್ ಹಾಸ್ಟೆಲ್–ಭಾರತ್ ಬೀಡಿ–ಬಟ್ಟಗುಡ್ಡ–ಕೆಪಿಟಿ ಅಥವಾ ಬಂಟ್ಸ್ ಹಾಸ್ಟೆಲ್–ಭಾರತ್ ಬೀಡಿ–ಮಲ್ಲಿಕಟ್ಟೆ ಮಾರ್ಗವನ್ನು ಬಳಸಬೇಕು.
ಕೆಎಸ್ಆರ್ಟಿಸಿ ಜಂಕ್ಷನ್ನಿಂದ ಲಾಲ್ಭಾಗ್ ಕಡೆಗೆ ತೆರಳುವ ವಾಹನಗಳು ಕಾಪಿಕಾಡ್–ಕುಂಟಿಕಾನ ಅಥವಾ ಬಿಜೈ–ಬಟ್ಟಗುಡ್ಡ ಮಾರ್ಗವಾಗಿ ಸಂಚರಿಸಬೇಕು. ಕೆಎಸ್ಆರ್ಟಿಸಿ ಬಸ್ಗಳಿಗೂ ಇದೇ ಪರ್ಯಾಯ ಮಾರ್ಗಗಳನ್ನು ನಿಗದಿಪಡಿಸಲಾಗಿದೆ.
ಹಂಪನಕಟ್ಟೆಯಿಂದ ಕೆಎಸ್ಆರ್ ರಸ್ತೆಯ ಮೂಲಕ ನವಭಾರತ ವೃತ್ತ ಮಾರ್ಗವಾಗಿ ಪಿ.ವಿ.ಎಸ್. ಜಂಕ್ಷನ್ಗೆ ತೆರಳುವ ವಾಹನಗಳು ಹಂಪನಕಟ್ಟೆ–ಎಲ್.ಎಚ್.ಎಚ್.–ಅಂಬೇಡ್ಕರ್ ಜಂಕ್ಷನ್ ಮಾರ್ಗವನ್ನು ಬಳಸಬೇಕು.
ನ್ಯೂಚಿತ್ರಾ ಜಂಕ್ಷನ್ನಿಂದ ನವಭಾರತ ವೃತ್ತದ ಕಡೆಗೆ ತೆರಳುವ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು. ಲೇಡಿಹಿಲ್ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಮಣ್ಣಗುಡ್ಡೆ ಜಂಕ್ಷನ್, ದುರ್ಗಾಮಹಲ್ ಮೂಲಕ ಕುದ್ರೋಳಿ ದೇವಸ್ಥಾನದ ಕಡೆಗೆ ಬರುವ ವಾಹನಗಳಿಗೂ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ದಸರಾ ವೀಕ್ಷಕರಿಗೆ 11 ಕಡೆ ಪಾರ್ಕಿಂಗ್ ವ್ಯವಸ್ಥೆ
ಮಂಗಳೂರು ದಸರಾ ಮೆರವಣಿಗೆಯನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರ ವಾಹನಗಳ ನಿಲುಗಡೆಗಾಗಿ ನಗರದ ವಿವಿಧೆಡೆ 11 ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
- ಕರಾವಳಿ ಮೈದಾನ ಪಾರ್ಕಿಂಗ್
- ಅಳಕೆ ಮಾರ್ಕೆಟ್ ಪಾರ್ಕಿಂಗ್
- ಉರ್ವ ಮಾರ್ಕೆಟ್ ಮೈದಾನ
- ಉರ್ವ ಕೆನರಾ ಸ್ಕೂಲ್ ಪಾರ್ಕಿಂಗ್
- ಕೆನರಾ ಡೊಂಗರಕೇರಿ ಸ್ಕೂಲ್ ಪಾರ್ಕಿಂಗ್
- ಪೊಂಪೈ ಚರ್ಚ್ ಪಾರ್ಕಿಂಗ್
- ದುರ್ಗಾಮಹಲ್ ಹೋಟೆಲ್ ಪಾರ್ಕಿಂಗ್
- ಕುದ್ರೋಳಿ ನಾರಾಯಣ ಕಾಲೇಜು ಪಾರ್ಕಿಂಗ್
- ಬಿ.ಇ.ಎಂ. ಸ್ಕೂಲ್ ಪಾರ್ಕಿಂಗ್
- ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ, ಕಾರ್ ಸ್ಟ್ರೀಟ್
- ಹೋಟೆಲ್ ವಿಮಲೇಶ್ ಪಾರ್ಕಿಂಗ್
ಮಂಗಳೂರು ದಸರಾ ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಿ, ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳನ್ನೇ ಬಳಸುವಂತೆ ಹಾಗೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಸಹಕರಿಸುವಂತೆ ಸೂಚಿಸಲಾಗಿದೆ.
