ಮಂಗಳೂರು: ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ, ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಹಾಗೂ ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಕ್ರೀಡಾಪಟುಗಳು ಸಾಧನೆ ಮೆರೆದಿದ್ದಾರೆ.
ಗದಗ್ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಈ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಾದ ಮೊಹಮ್ಮದ್ ಅನೀಕ್, ಮೊಹಮ್ಮದ್ ಶಾಹಿಮ್ ಸ್ವಾಲಿ, ಮೊಹಮ್ಮದ್ ಅಮೀನ್, ಮೊಹಮ್ಮದ್ ಮುನಾಫ್, ಮಹಮ್ಮದ್ ತಬ್‌ಶೀರ್, ಅಬ್ದುಲ್ ಸಝಿಲ್, ಸುದೀಪ್ ಶಿವಪ್ಪ ಹಾಗೂ ಪ್ರಥ್ವಿನ್ ಅವರು ಶಾಲೆಗೆ ಕೀರ್ತಿ ತಂದಿದ್ದಾರೆ.
ಈ ಸಾಧನೆಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ, ಶಾಲಾ ಸಂಚಾಲಕರಾದ ಕಡೆಂಜ ಸೋಮಶೇಖರ್ ಚೌಟ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ ಅವರು ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದ್ದಾರೆ.
ಕ್ರೀಡಾಪಟುಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.