Site icon Ullalavani

ಕುತ್ತಾರು : ಬೇಸಿಗೆಕಾಲದಲ್ಲಿಯೂ ತುಂಬಿ ತುಳುಕುತ್ತಿದ್ದ ಕೊರಗಜ್ಜ ರಚಿಸಿದ್ದ ಕನ್ನಡಿಕೆರೆ, ಮತ್ತೆ ಕೆರೆ ಅಭಿವೃದ್ಧಿಗೆ ಒಂದಾದ ಮುಂಡೋಳಿ-ಪಿಲಾರು ಗ್ರಾಮಸ್ಥರು

Screenshot
Screenshot
Screenshot
Screenshot


ಕುತ್ತಾರು : ಅಂದು ರಾಜನಿಗೆ ಸಹಕಾರವಾಗುವಂತೆ ಕೊರಗಜ್ಜ ರಚಿಸಿದ್ದ ಕನ್ನಡಿಕೆರೆ ಅಸ್ತಿತ್ವನ್ನು ಕಳೆದುಕೊಂಡು ಅದೆಷ್ಟೋ ವರ್ಷಗಳಾಗಿದೆ. ಒಂದು ಕಾಲದಲ್ಲಿ ಬೇಸಿಗೆ ಕಾಲದಲ್ಲಿಯೂ ತುಂಬಿತುಳುಕುತ್ತಾ ಕೃಷಿ ಚಟುವಟಿಕೆಗಳಿಗೆ ಆಸರೆಯಾಗಿದ್ದ ದೈವಶಕ್ತಿ ಹಿನ್ನೆಲೆಯುಳ್ಳ ಕೆರೆಗೆ ಕಾಯಕಲ್ಪವನ್ನೇ ನೆರವೇರಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗಳನ್ನು ಮನಗಂಡು ಒಂದಾದ ಮುಂಡೋಳಿ ಗ್ರಾಮದ ಗ್ರಾಮಸ್ಥರು ಇಂದಿಗೆ ದ್ವಿತೀಯ ಸುತ್ತಿನ ಸಭೆಯನ್ನು ಗ್ರಾಮದ ಪಿಲಾರು ಪಂಜಂದಾಯ ಕ್ಷೇತ್ರದಲ್ಲಿ ನೆರವೇರಿಸಿ ಜೀರ್ಣೊದ್ಧಾರ ನಡೆಸುವ ಸಲುವಾಗಿ ಆರಂಭದಲ್ಲಿ ಪ್ರಶ್ನಾಚಿಂತನೆಯನ್ನು ಕೈಗೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ.
ಐತಿಹಾಸಿಕ ಹಿನ್ನೆಲೆಯ, ದೈವಾರಾಧನೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ಕನ್ನಡಿಕೆರೆ ಹಲವು ವರ್ಷಗಳಿಂದಲೇ ಕಾಣದಂತಾಗಿದೆ. ಆರ್ಕಿಟೆಕ್ಟ್‌ ವಿದ್ಯಾರ್ಥಿಗಳ ಸಂಶೋಧನಾ ವರದಿಗಳ ಪ್ರಕಾರ 70-60 ವರ್ಷಗಳ ಹಿಂದೆ ಸಿಡಿಲು ಬಡಿದ ಪರಿಣಾಮ ಕೆರೆಯಲ್ಲಿ ನೀರು ಕಡಿಮೆಯಾಗಿ ಬಳಿಕ ಕೆರೆಯೇ ಇಲ್ಲದಂತಾಗಿತ್ತು. ನೀರು ಹರಿವು ಕುರಿತು ವಿದ್ಯಾರ್ಥಿಗಳು ನಡೆಸಿರುವ ಅಧ್ಯಯನದಲ್ಲಿಯೂ ನೀರಿನ ಒರತೆಗಳು ಕಂಡಿರಲಿಲ್ಲ. ಆದರೆ ನಶಿಸಿಹೋದ ಕೆರೆಯ ಸುತ್ತ ಹಲವು ಅಚಾತುರ್ಯಗಳು ನಡೆಯುತ್ತಲೇ ಬಂದಿತ್ತು. ರಾತ್ರಿ ಹೊತ್ತು ಕೇಳುವ ಕೂಗನ್ನು ಆಲಿಸಲು ತೆರಳಿದ್ದ ನಾಲ್ವರು ಗ್ರಾಮಸ್ಥರ ಪೈಕಿ ಮೂವರು ವಿವಿಧ ಕಾರಣದಲ್ಲಿ ಸಾವನ್ನಪ್ಪಿದ್ದಾರೆ. ಒಬ್ಬರು ಮಾತ್ರ ನಾಲ್ವರ ಪೈಕಿ ಬದುಕುಳಿದಿದ್ದಾರೆ. ಇದು ಹಿಂದೆ ನಡೆಸಿರುವ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿರುವುದನ್ನು ಗ್ರಾಮಸ್ಥರು ವಿವರಿಸುತ್ತಾರೆ. ಇದೀಗ ಮತ್ತೆ ಕೆರೆಯ ಅಭಿವೃದ್ಧಿಯಾಗಬೇಕು, ಮುಂಡೋಳಿ ಗ್ರಾಮದ ಜನರು ಸುಖೀ ಜೀವನ ನಡೆಸಬೇಕು ಅನ್ನುವ ಉದ್ದೇಶದೊಂದಿಗೆ ಗ್ರಾಮಸ್ಥರು ಅ.11 ರಂದು ಪ್ರಥಮ ಸಭೆ ಸೇರಿ, ಮತ್ತೆ ಅ.18 ಕ್ಕೆ ಊರಿನ ರಾಜಂದೈವ ಪಂಜಂದಾಯನ ಕ್ಷೇತ್ರದಲ್ಲಿ ಪ್ರಾರ್ಥನೆ ನೆರವೇರಿಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಪ್ರಶ್ನಾಚಿಂತನೆಗೆ ಜನ ಗುರುತಿಸಿ ಅತಿಶೀಘ್ರವೇ ಎಲ್ಲರನ್ನೂ ಜೊತೆಯಾಗಿಸಿಕೊಂಡು ಕೆರೆಯ ಅಭಿವೃದ್ಧಿಯನ್ನು ನಡೆಸುವ ತೀರ್ಮಾನಕ್ಕೆ ಬಂದಿದ್ದಾರೆ. ವಿಜೃಂಭಣೆಯಲ್ಲದ ಸರಳವಾಗಿ ಹಿಂದಿನ ಚಿತ್ರಣವನ್ನೇ ಮತ್ತೆ ರಚಿಸಬೇಕು ಅನ್ನುವ ಉದ್ದೇಶಕ್ಕೆ ಎಲ್ಲರೂ ಸಹಮತವನ್ನು ಸೂಚಿಸಿದ್ದಾರೆ.
ರವೀಂದ್ರ ಪೂಂಜ ಮಾಗಣ್ತಡಿ ಮಾತನಾಡಿ, ಪಂಜಂದಾಯ ಹಾಗೂ ಮಲಯಾಳಿ ಚಾಮುಂಡಿ ದೈವಗಳ ಕುರಿತ ವಿವಾದಗಳು, ಉಂಟಾದಾಗ ಸರಿಪಡಿಸಿದವರು ಕೊರಗಜ್ಜ, ಎರಡು ಗ್ರಾಮಗಳ ಶಕ್ತಿಯನ್ನು ಒಂದುಗೂಡಿಸಿದಂತಹ ಸ್ವಾಮಿ ಕೊರಗಜ್ಜ ಕನ್ನಡಿಕೆರೆಯನ್ನು ರಚಿಸಿ, ಅಂದಿನ ರಾಣಿಯ ಹೊಟ್ಟೆನೋವು ವಿಪರೀತವಾದಾಗ ಸಹಕಾರಿಯಾದವರು. ಇದೀಗ ಮತ್ತೆ ಅದೇ ಕೆರೆಯ ಹೆಸರು ಚಾಲ್ತಿಗೆ ಬಂದಿದ್ದು, ಗ್ರಾಮದಲ್ಲಿ ಉಂಟಾಗುವ ಅವಘಢಗಳನ್ನು ತಪ್ಪಿಸುವ ಉದ್ದೇಶದಿಂದ ಮುಂಡೋಳಿ-ಪಿಲಾರು ಗ್ರಾಮದ ಮಂದಿ ಜತೆಯಾಗಿದ್ದೇವೆ. ಅತೀ ಶೀಘ್ರದಲ್ಲಿ ದೈವಜ್ಞರಲ್ಲಿ ಪ್ರಶ್ನಾಚಿಂತನೆಯನ್ನು ನಡೆಸಿ ದೈವದ ಕಟ್ಟಿನಲ್ಲಿ ಯಾವುದೇ ನ್ಯೂನತೆ ಉಂಟಾಗದಂತೆ, ಮತ್ತೆ ಕೆರೆಯನ್ನು ಅಭಿವೃದ್ಧಿ ಪಡೆಸಿ ಎಲ್ಲರೂ ಪೂರ್ಣ ಪ್ರಮಾಣದಲ್ಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿಯಾಗುವಂತೆ ಮನವಿ ಮಾಡಿದರು. ಮುಂಡೋಳಿ ಮತ್ತು ಪಿಲಾರು ಭಾಗಗಳಲ್ಲಿ ನಡೆದ ಕೆಲವು ಘಟನೆಗಳ ಕುರಿತು ಸರಿಯಾದ ತಿಳುವಳಿಕೆ ಇಲ್ಲದ ಸಂದರ್ಭದಲ್ಲಿ, ಇತರರು ತಿಳಿಸಿದ ಬಳಿಕವೇ ವಿಚಾರಗಳು ಅರಿವಿಗೆ ಬಂದಿವೆ.ಈ ಘಟನೆಗಳ ನೈಜ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾದರೆ ಆಳವಾದ ಚಿಂತನೆ ನಡೆಸುವುದು ಅಗತ್ಯ. ದೈವಜ್ಞರು ತೋರಿಸುವ ಮಾರ್ಗದರ್ಶನವನ್ನು ಅರಿತು, ದೈವದ ಕಟ್ಟಿನಲ್ಲಿ ಯಾವುದೇ ನ್ಯೂನತೆ ಉಂಟಾಗದಂತೆ ಪೂರ್ಣ ಪ್ರಮಾಣದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ಐತಿಹಾಸಿಕ ಹಿನ್ನೆಲೆ
ಸಂಧಿ-ಪಾಡ್ದನಗಳಲ್ಲಿ ಕನ್ನಡಿಕೆರೆಯ ಉಲ್ಲೇಖವೂ ಇದೆ. ರಾಜರುಗಳಿಬ್ಬರ ಕಲಹದ ಸಂದರ್ಭ ಕೊರಗಜ್ಜ ಮತ್ತು ಕನ್ನಡಿಕೆರೆಯ ಕುರಿತು ಉಲ್ಲೇಖಗಳಿವೆ. ರಾಜನ ಪತ್ನಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಾಗ ಕನ್ನಡಿಕೆರೆಯ ನೀರು ಔಷಧವಾಗಿತ್ತು. ಸಿರಿಗಳು ಸ್ನಾನ ಮಾಡುವ ಕೆರೆಗಳಾಗಿತ್ತು. ಕದ್ರಿ ಮಂಜುನಾಥ ಕ್ಷೇತ್ರದಲ್ಲಿರುವಂತೆ ಏಳು ಕೆರೆಗಳು ಮುಂಡೋಳಿ ಪ್ರದೇಶದಲ್ಲಿತ್ತು. ಅದರಿಂದಲೇ ಕೃಷಿ ಚಟುವಟಿಕೆಗಳು ಕೆರೆಯನ್ನೇ ಅವಲಂಬಿತವಾಗಿತ್ತು. ಕೆರೆ ಅಭಿವೃದ್ಧಿಗೊಳ್ಳದೇ ಸಮೀಪದ ಗುಳಿಗ ದೈವದ ನೆಲೆಯೂ ಅಭಿವೃದ್ಧಿಯನ್ನು ಕಂಡಿಲ್ಲ. ಬೇಸಿಗೆ ಕಾಲದ ಕೊನೆಯಲ್ಲಿಯೂ ಕೆರೆಯಲ್ಲಿ ನೀರು ತುಂಬಿ ತುಳುಕುತಿತ್ತು. ಎಮ್ಮೆ, ಎತ್ತು ಸೂತಗದವರು ಅಂದು ಇಳಿಯಲು ಅವಕಾಶವಿರಲಿಲ್ಲ. ಕುತ್ತಾರು ಭಾಗದಲ್ಲಿ ಯಾವುದೇ ಕಾರ್ಯವನ್ನು ನಡೆಸುವ ಮುನ್ನ ಅಜ್ಜನ ಆಶಿರ್ವಾದ ಕೇಳಿಯೇ ಮುಂದುವರಿಯಲಾಗುತ್ತಿದೆ. ಇದೀಗ ಅಜ್ಜನ ಕೋಲದಲ್ಲಿ ಕೆರೆಯ ಕುರಿತು ಅಭಿವೃದ್ಧಿ ಪಡಿಸುವಂತೆ ಸೂಚನೆಯೂ ವ್ಯಕ್ತವಾಗಿ ಮುಂಡೋಳಿ-ಪಿಲಾರು ಭಾಗದವರೆಲ್ಲರೂ ಜೊತೆಯಾಗಿದ್ದಾರೆ.
ಕನ್ನಡಿಕೆರೆ ಅಭಿವೃದ್ಧಿ ಸಭೆಯಲ್ಲಿ ಶ್ರೀ ಪಂಜಂದಾಯ ಸೇವಾ ಸಮಿತಿ ಪಿಲಾರು ಇದರ ಉಪಾಧ್ಯಕ್ಷ ಸದಾಶಿವ ಶೆಟ್ಟಿ, ಪುರುಷೋತ್ತಮ್‌ ಬಾರ್ದೆ, ಕೋಶಾಧಿಕಾರಿ ಸದಾಶಿವ ಶೆಟ್ಟಿ, ಭರತ್‌ ರಾಜ್‌ ಮುಂಡೋಳಿ, ಪುರುಷೋತ್ತಮ್‌ ಶೆಟ್ಟಿ ಪಿಲಾರು, ಶ್ರೀಧರ್‌ ಆಳ್ವ, ಐತಪ್ಪ ಗಟ್ಟಿ ಮುಂಡೋಳಿ, ಧನರಾಜ್‌ ಬಾರ್ದೆ, ಸುರೇಶ್‌ ಗಟ್ಟಿ , ಯೋಗೀಶ್‌ ಪ್ರಕಾಶನಗರ, ನಾರಾಯಣ ಗಟ್ಟಿ ಮುಂಡೋಳಿ, ಶೇಖರ್‌ ಮುಂಡೋಳಿ, ಶಶಿಧರ್‌ ಮುಂಡೋಳಿ, ವಿಶ್ವನಾಥ ಸನಿಲ್‌ ಮುಂಡೋಳಿ, ನವೀನ್‌ ಮುಂಡೋಳಿ ಮೊದಲಾದವರು ಉಪಸ್ಥಿತರಿದ್ದರು.

Exit mobile version