ರಾಜ್ಯದ ಮುಸ್ಲಿಂ ಸಮುದಾಯದ ಮಸೀದಿ, ಮದ್ರಸ, ಶಿಕ್ಷಣ ಸಂಸ್ಥೆ, ದರ್ಗಾ ಮೊದಲಾದವುಗಳ ಆಡಳಿತ ಸಮಿತಿಗಳ ಒಕ್ಕೂಟವಾಗಿ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ SMA ಎಂಬ ಸಂಘಟನೆಯು ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ರಾಜ್ಯದ ಮುಸ್ಲಿಂ ಸಮುದಾಯ ಬಾಂಧವರಲ್ಲಿ ಸಮಾಜದ ಒಗ್ಗಟ್ಟು, ಸಚ್ಚಾರಿತ್ರ್ಯ, ವಿದ್ಯಾರ್ಥಿಗಳಲ್ಲಿ ಒಳಿತಿಗಾಗಿ ಬೋಧನೆ, ನೀತಿ ಶಿಕ್ಷಣ ನೀಡುವುದು, ಇದಕ್ಕಾಗಿ ಶಿಕ್ಷಣ ನೀಡುವ ಸಂಸ್ಥೆಗಳನ್ನು ಕಳೆದ ವರ್ಷಗಳಲ್ಲಿ ನಿರ್ಮಾಣ ಮಾಡಿದೆ. ಶೌಚಾಲಯ ರಹಿತ ಮದ್ರಸಗಳಲ್ಲಿ ಶೌಚಾಲಯ ನಿರ್ಮಿಸಿ ನೀಡಿದೆ. ವಿಕಲ ಚೇತನ ವಿದ್ಯಾರ್ಥಿಗಳಿಗೆ ಸಹಾಯ, ಮದ್ರಸಗಳಿಗೆ ಪೀಠೋಪಕರಣ ವ್ಯವಸ್ಥೆ, ಕೊಳವೆ ಬಾವಿ ನಿರ್ಮಾಣ ಮೊದಲಾದ ಯೋಜನೆಗಳಿವೆ.
ಸಂಘಟನೆಯ ರಾಜ್ಯ ಸಮಿತಿಯು ಮುಸ್ಲಿಂ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರೇರು ಉಮ್ಮಃ ಎಂಬ ಶೀರ್ಷಿಕೆಯಲ್ಲಿ ಉತ್ತಮ ಸಮುದಾಯ ಎಂಬ ಘೋಷ ವಾಕ್ಯದಲ್ಲಿ ಈ ಕಳೆದ ಏಪ್ರಿಲ್ನಲ್ಲಿ ಸಮುದಾಯ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಇದರ ವಿವಿಧ ಕಾರ್ಯಕ್ರಮಗಳು ಸಂಘಟನೆಯ ಕಲ್ಪಟಕಗಳಲ್ಲಿ ನಡೆಸಲಾಗಿದೆ. ರೀಜನಲ್ ಮಟ್ಟದಲ್ಲಿ ಕಮ್ಯೂನಿಟಿ ಟಾಕ್, ರಾಜ್ಯೋನ್ ಮತಿಯಿಂದ ವಿವಿಧ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳಿಂದ ಕಮ್ಯೂನಿಟಿ ಡಿಬೇಟ್ ಕಾರ್ಯಕ್ರಮ ನಡೆಸಲಾಗಿದೆ. ಗ್ರಾಮ ಮಟ್ಟದಲ್ಲಿ ಪ್ರತೀ ಮಸೀದಿಯನ್ನು ಕೇಂದ್ರವಾಗಿಸಿ ಸಮುದಾಯದ ಕಾರ್ಯಕ್ರಮದಲ್ಲಿ ಜನರಿಗೆ ಬೋಧನೆ ನೀಡಲಾಗಿದೆ. ಆ ಬಳಿಕ ಜಿಲ್ಲಾ ಕೇಂದ್ರಗಳಲ್ಲಿ ಸಾರ್ವಜನಿಕವಾಗಿ ಕಮ್ಯೂನಿಟಿ ಕಾನ್ಫರೆನ್ಸ್ ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಗಿದೆ.
ಇದೀಗ ಪ್ರೇರು ಉಮ್ಮಃ ಅಭಿಯಾನದ ಸಮಾರೋಪವಾಗಿ ಅಕ್ಟೋಬರ್ 20ನೇ ಮಂಗಳವಾರ ರಾಜ್ಯ ಮಟ್ಟದ ಆಯ್ಕೆ ಪ್ರತಿನಿಧಿಗಳ ಸಮಾವೇಶ ಬೆಂಗಳೂರಿನಲ್ಲಿ ನಡೆಯಲಿದೆ. ಈ ಅಭಿಯಾನದ ಸಂದರ್ಭದಲ್ಲಿ ಸಮುದಾಯ ಎದುರಿಸುವ ಹಲವು ಬಗೆಯ ಅನಾಚಾರಗಳು, ಸಮುದಾಯದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಯ ಪ್ರಕರಣಗಳು, ಕುಟುಂಬಿಕ ಕಲಹ – ವಿವಾಹ ವಿಚ್ಛೇದನ, ಮಾದಕದ್ರವ್ಯ ವ್ಯಸನ, ಮಿತಿಮೀರಿದ ಆಡಂಭರದ ಜೀವನ ಶೈಲಿ ದುಂದು ವೆಚ್ಚ, ಸಜ್ಜನರ ಸ್ಮರಣೆ, ಆಧ್ಯಾತ್ಮಿಕತೆಯ ಹೆಸರಿನ ಕಾರ್ಯಕ್ರಮದ ಸುತ್ತ ನಡೆಯುವ ಅನಾಚಾರಗಳು ಇವುಗಳ ಬಗ್ಗೆ ಜಾಗೃತಿ ಮೂಡಿಸಲು ಎಸ್.ಎಂ.ಎ. ಕರ್ನಾಟಕ ರಾಜ್ಯ ಸಮಿತಿ ಪ್ರಯತ್ನ ಮಾಡಿದೆ.
ಅಭಿಯಾನದ ಸಮಾರೋಪ ಕಮ್ಯೂನಿಟಿ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸನ್ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಆರೋಗ್ಯ, ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆ ಸಚಿವರಾದ ಯು.ಟಿ ಖಾದರ್, ವಸತಿ ಸಚಿವರಾದ ಝಮೀರ್ ಅಹ್ಮದ್, ಆಹಾರ ಸಚಿವ ರಝ್ವಾನ್ ಅರ್ಷದ್, ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ, ಬಿ.ಎಂ. ಫಾರೂಕ್, ಇನಾಯತ್ ಅಲಿ, ಮೊಯ್ಯಿನ್ ಬಾವ ಮೊದಲಾದವರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ನಡೆಯುವ ತರಬೇತಿ ಕಾರ್ಯಾಗಾರವನ್ನು ಕೇಂದ್ರ ಸರ್ಕಾರದ ಮಾಜಿ ಸಚಿವರಾದ ಸಿ.ಎಂ.ಇಬ್ರಾಹಿಂ ಉದ್ಘಾಟಿಸಲಿದ್ದಾರೆ. ಎಸ್.ಎಂ.ಎ. ರಾಜ್ಯಾಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಲಿದ್ದು, ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿಪ್ಪು ಅಬ್ದುಲ್ ರಹ್ಮಾನ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡುವರು. ವಿವಿಧ ವಿಷಯಗಳಲ್ಲಿ ಎಸ್.ಎಂ. ಎ.ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ: ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಡಾ: ಅಬ್ದುಲ್ ರಶೀದ್ ಸಖಾಫಿ ರುಕ್ಕನಿ ಕಾಮಿಲ್, ಅನಸ್ ಸಿದ್ದೀಕಿ ತರಬೇತಿ ನೀಡಲಿದ್ದಾರೆ. ಎಸ್.ಎಂ.ಎ. ಇದರ ವಿವಿಧ ಘಟಕಗಳ ಪದಾಧಿಕಾರಿಗಳು ಸಮಾವೇಶದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಕೂಡುಂಗಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.