ಅನುದಾನಿತ ಪ್ರಾಥಮಿಕ ಶಾಲೆಗಳಿಗೂ ದ್ವಿಭಾಷಾ ಪಠ್ಯಪುಸ್ತಕ ನೀತಿ ಜಾರಿಗೊಳಿಸಲು ಒತ್ತಾಯ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ವಿತರಿಸಲಾಯಿತು.
ಶಿಕ್ಷಕರಾದ ಸ್ಟ್ಯಾನಿ ಫ್ರಾನ್ಸಿಸ್ ಬೆರೆಟ್ಟೋ ಅವರು ತಮ್ಮ ಖಾಸಗಿ ಟ್ರಸ್ಟ್ ಮೂಲಕ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ 35 ಮಂದಿ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಿದರು.
ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘದ ಅಧ್ಯಕ್ಷರಾದ ಕೆ.ಎನ್.ಕೆ. ಮಂಜನಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ಸ್ಟ್ಯಾನಿ ಫ್ರಾನ್ಸಿಸ್ ಬೆರೆಟ್ಟೋ ಅವರು, ಉಭಯ ಜಿಲ್ಲೆಗಳ ಸಂಘದ ಸದಸ್ಯರ ಮಕ್ಕಳು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದರೆ, ಅವರ ಶೈಕ್ಷಣಿಕ ಬೆಳವಣಿಗೆಗೆ ತಮ್ಮ ಟ್ರಸ್ಟ್ ಮೂಲಕ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಸಂಘದ ನಿರ್ದೇಶಕರಾದ ಪ್ರಭಾಕರ ಶೆಟ್ಟಿ, ಅಂಬರೀಶ್, ಹಿಲ್ಡಾ ಕ್ಲಾಮೆನ್ಸಿಯಾ ಪಿಂಟೋ, ಪುಟ್ಟಸ್ವಾಮಿ, ತಿಪ್ಪೂಜಿ, ರೀಟಾ ಡೇಸಾ, ಚಂದ್ರಶೇಖರ್ ಎಚ್., ವನಿತಾ ಸುರೇಶ್, ಮಾರ್ಕ್ ಮೆಂಡೋನ್ಸಾ, ಉಸ್ಮಾನ್, ರವಿಕಲಾ ಶೆಟ್ಟಿ, ರೂಪಾಕ್ಷ, ವಾಸುದೇವ ರಾವ್, ರಘುನಾಥ ಭಟ್, ಎಂ.ಎಸ್. ಮಹೇಶ್, ವಾಣಿ, ಗೀತಾ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರ್ಮಿಳಾ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಉದಯಶಂಕರ್ ನಾಯಕ್ ಟಿ. ಅವರು ಧನ್ಯವಾದ ಸಮರ್ಪಿಸಿದರು.
ಅನುದಾನಿತ ಪ್ರಾಥಮಿಕ ಶಾಲೆಗಳಿಗೂ ದ್ವಿಭಾಷಾ ಪಠ್ಯಪುಸ್ತಕ ನೀತಿ ಜಾರಿಗೊಳಿಸಲು ಒತ್ತಾಯ
ಮಂಗಳೂರು: ಕರ್ನಾಟಕ ರಾಜ್ಯದ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದಾಗಿ ಅಳಿವಿನಂಚಿನಲ್ಲಿದ್ದು, ಈ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ನೀಡುವ ಸೌಲಭ್ಯಗಳನ್ನು ಅನುದಾನಿತ ಶಾಲೆಗಳಿಗೂ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷ ಕೆ.ಎಂ.ಕೆ. ಮಂಜನಾಡಿ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಸರಕಾರಿ ಶಾಲೆಗಳಲ್ಲಿ ಜಾರಿಗೊಳಿಸಲಾಗುತ್ತಿರುವ ದ್ವಿಭಾಷಾ ಬೋಧನಾ ವ್ಯವಸ್ಥೆ ಹಾಗೂ ದ್ವಿಮಾಧ್ಯಮ ಪಠ್ಯಪುಸ್ತಕಗಳ ಸೌಲಭ್ಯ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೂ ದೊರೆಯಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.
ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಡ್ಡಾಯ ಪ್ರಾಥಮಿಕ ಶಿಕ್ಷಣದಡಿ ದೊರೆಯುವ ಕೆಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕಾಲಕಾಲಕ್ಕೆ ಬದಲಾಗುವ ಬೋಧನಾ ವಿಧಾನಗಳು, ಹೊಸ ಶೈಕ್ಷಣಿಕ ಕ್ರಮಗಳು ಹಾಗೂ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ತರಬೇತಿ ಮತ್ತು ಮಾಹಿತಿಗಳು ಮುಖ್ಯವಾಗಿ ಸರಕಾರಿ ಶಾಲೆಗಳಿಗೆ ಸೀಮಿತವಾಗಿವೆ. ಕ್ಲಸ್ಟರ್ ಮಟ್ಟದಲ್ಲಿ ನಡೆಯುವ ಮಾಸಿಕ ಪಠ್ಯಪುಸ್ತಕ ವಿಚಾರ ವಿನಿಮಯ ಕಾರ್ಯಕ್ರಮಗಳಲ್ಲಿಯೂ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಭಾಗವಹಿಸಲು ಅವಕಾಶವಿಲ್ಲದಿರುವುದು ಬೋಧನಾ ಪ್ರಕ್ರಿಯೆಗೆ ಅಡಚಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ದ್ವಿಭಾಷಾ ಅಥವಾ ದ್ವಿಮಾಧ್ಯಮ ಪಠ್ಯಪುಸ್ತಕಗಳನ್ನು ಮುದ್ರಿಸಿ ವಿತರಿಸುವ ಮೂಲಕ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಆದರೆ ಅನುದಾನಿತ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯದಿರುವುದರಿಂದ ಅವರು ಶೈಕ್ಷಣಿಕವಾಗಿ ಹಿಂದುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಅನುದಾನಿತ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದ್ದರಿಂದ 2027-28ನೇ ಶೈಕ್ಷಣಿಕ ಸಾಲಿನಿಂದ ಅನುದಾನಿತ ಪ್ರಾಥಮಿಕ ಶಾಲೆಗಳಿಗೂ ದ್ವಿಭಾಷಾ ಪಠ್ಯಪುಸ್ತಕಗಳನ್ನು ಒದಗಿಸಿ, ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಕೆ.ಎಂ.ಕೆ. ಮಂಜನಾಡಿ ಅವರು ಸರಕಾರವನ್ನು ವಿನಂತಿಸಿದ್ದಾರೆ.
ದ್ವಿಭಾಷಾ ನೀತಿ ಜಾರಿಯಾದರೆ ವಿದ್ಯಾರ್ಥಿಗಳಿಗೆ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯನ್ನೂ ಕಲಿಯಲು ಅನುಕೂಲವಾಗಲಿದೆ. ಇದರಿಂದ ಅನುದಾನಿತ ಶಾಲೆಗಳ ಮೇಲಿನ ಪೋಷಕರ ಆಸಕ್ತಿ ಹೆಚ್ಚುವುದರೊಂದಿಗೆ ವಿದ್ಯಾರ್ಥಿಗಳ ದಾಖಲಾತಿಯೂ ವೃದ್ಧಿಯಾಗುವ ನಿರೀಕ್ಷೆಯಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೂ ಯಾವುದೇ ತಾರತಮ್ಯವಿಲ್ಲದೆ ಸರಕಾರಿ ಶಾಲೆಗಳಿಗೆ ಸಮಾನವಾದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದರ ಜೊತೆಗೆ, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆದಿಲ್ಲ. ಪ್ರೌಢಶಾಲೆಗಳಲ್ಲಿ ಕೆಲವು ನಿರ್ದಿಷ್ಟ ಅವಧಿ ಮತ್ತು ಕಾರಣಗಳಿಗಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶವಿದ್ದರೂ, ಪ್ರಾಥಮಿಕ ಶಾಲೆಗಳಲ್ಲಿ ಅಂತಹ ವ್ಯವಸ್ಥೆ ಇಲ್ಲವಾಗಿದೆ. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕದ ಮೂಲಕ ಬೋಧನಾ ಕಾರ್ಯ ಸುಸೂತ್ರವಾಗಿ ನಡೆಯಲು ಅವಕಾಶ ಕಲ್ಪಿಸಿರುವ ಸರಕಾರದ ಕ್ರಮವನ್ನು ಅವರು ಶ್ಲಾಘಿಸಿದ್ದಾರೆ.
ಅದೇ ಮಾದರಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿರುವ ಅನುದಾನಿತ ಪ್ರಾಥಮಿಕ ಶಾಲೆಗಳಿಗೂ ಅತಿಥಿ ಶಿಕ್ಷಕರನ್ನು ನೇಮಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಕೆ.ಎಂ.ಕೆ. ಮಂಜನಾಡಿ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.