Site icon Ullalavani

ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯಾಚಾರ! ಬೆಂಗಳೂರಲ್ಲಿ ಸತೀಶ್ ಪಾತ್ರಿ ಬಂಧನ

ಚಿಕ್ಕಮಗಳೂರು, ಅಕ್ಟೋಬರ್ 13: ವಾವಾಚಾರ, ದೆವ್ವ ಬಿಡಿಸುವ ನೆಪದಲ್ಲಿ ಹಲವು ಖದೀಮರು ಹೇಯ ಕೃತ್ಯ ಎಸಗಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಚಿಕ್ಕಮಗಳೂರಿನಲ್ಲೂ ಅಂತೆಯೇ ಸಹ ಮಹಿಳೆಯ ಮೂಢ ನಂಬಿಕೆಯನ್ನೇ ಬಳಸಿಕೊಂಡ ವ್ಯಕ್ತಿಯೊಬ್ಬ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಕೊಪ್ಪ ಮತ್ತು ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದರು. ಮಹಿಳೆಯ ದೂರಿನ ಮೇರೆಗೆ ಆರೋಪಿ ಸತೀಶ್ ಪಾತ್ರಿಯನ್ನು ಕೊಪ್ಪ ಠಾಣೆ ಪೊಲೀಸರು ಬೆಂಗಳೂರಿನ ಜೆ.ಪಿ. ನಗರದಲ್ಲಿ ಕೊನೆಗೂ ಬಂಧಿಸಿದ್ದಾರೆ.

ಒಂದು ತಿಂಗಳಿಂದ ನಾಪತ್ತೆಯಾಗಿದ್ದ ಸತೀಶ್ ಪಾತ್ರಿ

ದೆವ್ವ ಬಿಡಿಸುವುದಾಗಿ ಹೇಳಿ ಹಾಸನ ಮೂಲದ ಮಹಿಳೆಯ ಮೇಲೆ ಆರೋಪಿ ಸತೀಶ್ ಪಾತ್ರಿ ನಿರಂತರವಾಗಿ ಅತ್ಯಾಚಾರವೆಸಿದ್ದ. ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಹಾಗೂ ತೀರ್ಥಹಳ್ಳಿಯ ಕುದುರೆಗುಂಡಿಗೆ ಕರೆದೊಯ್ದು ಈ ಕೃತ್ಯ ಎಸಗಿರುವುದಾಗಿ ಮಹಿಳೆ ಆರೋಪಿಸಿದ್ದರು. ಈ ಬಗ್ಗೆ ಸಂತ್ರಸ್ತೆ ಕೊಪ್ಪ ಮತ್ತು ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದರು. ತನ್ನ ಮೇಲೆ ಎಫ್ಐಆರ್ ಆಗುತ್ತಿದ್ದಂತೆ ಪರಾರಿಯಾಗಿದ್ದ ಸತೀಶ್, ಒಂದು ತಿಂಗಳ ಬಳಿಕ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸಂತ್ರತೆಯ ದೂರಿನ ಮೇರೆಗೆ ಎನ್.ಆರ್. ಪುರ ಠಾಣೆಯಲ್ಲಿ ಮೌಢ್ಯ ಪ್ರತಿಬಂಧಕ (ಬ್ಲಾಕ್ ಮ್ಯಾಜಿಕ್) ಕಾಯ್ದೆಯಡಿ ಮತ್ತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಈಗ ಪೊಲೀಸರು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.

ಆರೋಪಿ ವಿರುದ್ಧ ಕರಾವಳಿಯಲ್ಲಿ ತೀವ್ರ ಆಕ್ರೋಶ

ಈ ಹಿಂದೆ ಈತ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಭೂತ ಬಿಡಿಸುವ ನೆಪದಲ್ಲಿ ಬಲವಂತವಾಗಿ ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಿರುವ ಆಘಾತಕಾರಿ ವಿಚಾರ ಹೊರಬಂದಿತ್ತು.. ಸತೀಶ್ ಪಾತ್ರಿಯ ಈ ಅಮಾನವೀಯ ಕೃತ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.


ಪೊಲೀಸರಿಂದಲೆ ಸಿಕ್ತಿತ್ತಾ ಇನ್​ಸೈಡ್ ಮಾಹಿತಿ?

ಪೊಲೀಸರಿಂದ ತಲೆಮರೆಸಿಕೊಂಡಿದ್ದ ಸತೀಶ್ ಪಾತ್ರಿಗೆ ಪೊಲೀಸ್ ಇಲಾಖೆಯೊಳಗಿನಿಂದಲೇ ರಕ್ಷಣೆ ದೊರೆಯುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಎನ್.ಆರ್. ಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಕಾಂತೇಶ್ ಎಂಬಾತನೇ ಆರೋಪಿಗೆ ಠಾಣೆಯ ಪ್ರತಿ ಕ್ಷಣದ ಮಾಹಿತಿಯನ್ನು ರವಾನಿಸುತ್ತಿದ್ದನು. ಪೊಲೀಸರು ದಾಳಿಗೆ ಬರುವ ಮುಂಚೆಯೇ ಸಿಬ್ಬಂದಿಯಿಂದ ಮಾಹಿತಿ ಪಡೆದು ಆರೋಪಿ ಜಾಗ ಬದಲಾಯಿಸುತ್ತಿದ್ದನು ಎಂದು ಹೇಳಲಾಗಿದೆ. ಈ ಮಾಹಿತಿ ಸೋರಿಕೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಸ್‌ಪಿ ಜಿತೇಂದ್ರ ಕುಮಾರ್ ದಯ್ಮಾ ಅವರು ಕರ್ತವ್ಯಲೋಪ ಎಸಗಿದ ಪೇದೆ ಕಾಂತೇಶ್‌ನನ್ನು ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ.

Exit mobile version