Site icon Ullalavani

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಬೆಂಬಲ: ಅ. 16ರಂದು ಸಮಾಲೋಚನಾ ಸಭೆ

ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದ ಜನಸಾಮಾನ್ಯರಿಗೆ ನ್ಯಾಯ ಸುಲಭವಾಗಿ, ಶೀಘ್ರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ದೊರಕಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ಪೀಠ ಸ್ಥಾಪಿಸುವ ಬೇಡಿಕೆಗೆ ಬೆಂಬಲ ಕ್ರೋಡೀಕರಿಸಲು ಅಕ್ಟೋಬರ್ 16ರಂದು ಸಮಾಲೋಚನಾ ಸಭೆ ಆಯೋಜಿಸಲಾಗಿದೆ.

ಯುನೈಟೆಡ್ ಲೀಗಲ್ ರಿಸರ್ಚ್ ಆ್ಯಂಡ್ ಜಸ್ಟಿಸ್ ಟ್ರಸ್ಟ್ (ರಿ.), ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಶುಕ್ರವಾರ ಸಂಜೆ 4 ಗಂಟೆಗೆ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದ ಭಾರತೀಯ ರೆಡ್ ಕ್ರಾಸ್ ಕಟ್ಟಡದಲ್ಲಿ ಸಭೆ ನಡೆಯಲಿದೆ.

ಕರಾವಳಿ ಮತ್ತು ಮಲೆನಾಡಿನ ಜನರು ನ್ಯಾಯಕ್ಕಾಗಿ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಎದುರಿಸುವ ಪ್ರಯಾಣದ ತೊಂದರೆ, ಸಮಯದ ವ್ಯಯ ಹಾಗೂ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಅಗತ್ಯದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.

ಸಭೆಯಲ್ಲಿ ಜಿಲ್ಲೆಯ ವಿವಿಧ ವಕೀಲರ ಸಂಘಗಳ ಅಧ್ಯಕ್ಷರು, ಜನಪ್ರತಿನಿಧಿಗಳು, ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟ ಸಮಿತಿಯ ಸಂಚಾಲಕರು, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಮುಖಂಡರು ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹೈಕೋರ್ಟ್ ಪೀಠ ಸ್ಥಾಪನೆಯ ಅಗತ್ಯ, ಜನಸಾಮಾನ್ಯರಿಗೆ ದೊರೆಯಬಹುದಾದ ಪ್ರಯೋಜನಗಳು ಹಾಗೂ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಕುರಿತು ಸಮಾಲೋಚನೆ ನಡೆಯಲಿದೆ.

ನ್ಯಾಯದ ಸುಲಭ ಲಭ್ಯತೆ ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದ್ದು, ಪಕ್ಷಭೇದ, ಧರ್ಮಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ. ವಕೀಲರು, ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟಕ್ಕೆ ಬೆಂಬಲ ನೀಡುವಂತೆ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೋರಿದ್ದಾರೆ.

ಆಯೋಜಕರು: ಯುನೈಟೆಡ್ ಲೀಗಲ್ ರಿಸರ್ಚ್ ಆ್ಯಂಡ್ ಜಸ್ಟಿಸ್ ಟ್ರಸ್ಟ್ (ರಿ.), ದಕ್ಷಿಣ ಕನ್ನಡ ಜಿಲ್ಲೆ.

Exit mobile version