ಕೊಲ್ಯ: ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸುವ ಮೂಲಕ ಅಪಾಯಕಾರಿ ರೇಬಿಸ್ ಕಾಯಿಲೆಯಿಂದ ರಕ್ಷಿಸಬೇಕು ಎಂದು ರೋಟರಿ ಕ್ಲಬ್ ಮಂಗಳೂರು ಪೂರ್ವದ ಮಾಜಿ ಅಧ್ಯಕ್ಷ ರೊ. ಸದಾಶಿವ ಶೆಟ್ಟಿ ಹೇಳಿದರು.
ಮಂಗಳೂರಿನ ಕೊಲ್ಯದಲ್ಲಿರುವ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ವಠಾರದಲ್ಲಿ ರೋಟರಿ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ, ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ, ಯುವವಾಹಿನಿ (ರಿ.) ಕೊಲ್ಯ ಘಟಕ, ಎನಿಮಲ್ ಕೇರ್ ಟ್ರಸ್ಟ್ ಮಂಗಳೂರು ಹಾಗೂ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಳ್ಳಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಉಚಿತ ರೇಬಿಸ್ ನಿರೋಧಕ ಲಸಿಕಾ ಶಿಬಿರ ಮತ್ತು ದೇಸಿ ನಾಯಿ ಹಾಗೂ ಬೆಕ್ಕಿನ ಮರಿಗಳ ದತ್ತು ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಳ್ಳಾಲದ ನಿರ್ದೇಶಕಿ ಡಾ. ರಚನಾ ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ನಾಯಿಗೆ ಲಸಿಕೆ ನೀಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷೆ ರೊ. ಪಂಚಮಿ ಶೆಣೈ ಮಾತನಾಡಿ, ರೇಬಿಸ್ ಸೋಂಕು ಇಲ್ಲದ ನಾಯಿಗಳಿಗೂ ಮುಂದಿನ ದಿನಗಳಲ್ಲಿ ಈ ಕಾಯಿಲೆ ತಗಲುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಸಾಕು ನಾಯಿಗಳು ಸೇರಿದಂತೆ ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ರೇಬಿಸ್ ನಿರೋಧಕ ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಹಮ್ಮಿಕೊಂಡಿರುವ ಲಸಿಕಾ ಶಿಬಿರ ಶ್ಲಾಘನೀಯ ಎಂದರು.
ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಲೆಕ್ಕಪರಿಶೋಧಕ ಪ್ರಕಾಶ್ ಎಚ್. ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.) ಕೊಲ್ಯದ ಅಧ್ಯಕ್ಷ ಮೋಹನ್ ಶೆಟ್ಟಿ, ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಅನಿಲ್ ಕಾಸಿಕೆಟ್ಟು, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರದ ಅಧ್ಯಕ್ಷ ಸೀತಾರಾಮ ಕರ್ಕೇರ, ಕಾರ್ಯದರ್ಶಿ ಜಯದೇವ್, ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕಾಸಿಕೆಟ್ಟು, ರೋಟರಿ ಕ್ಲಬ್ ಮಂಗಳೂರು ಪೂರ್ವದ ಕಾರ್ಯದರ್ಶಿ ರೊ. ಪ್ರಮೋದ್ ಪ್ರಭು, ಆರ್.ಸಿ.ಸಿ. ಉಪಸಭಾಪತಿ ರೊ. ಜೈಕುಮಾರ್, ಮಾಜಿ ಅಧ್ಯಕ್ಷರಾದ ರೊ. ಜಯರಾಮ್ ಶೆಟ್ಟಿ, ರೊ. ವಿನೋದ್ ಕುಡ್ವ, ರೊ. ಪ್ರದೀಪ್, ರೊ. ಚಂದ್ರಶೇಖರ್ ದೈದೋಟ, ರೊ. ಮಹೇಶ್ ಚಂದ್ರ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಳ್ಳಾಲದ ನಿರ್ದೇಶಕಿ ಡಾ. ರಚನಾ, ಹಿರಿಯ ಮುಖಂಡ ಸೀತಾರಾಮ್ ಬಂಗೇರ ಹಾಗೂ ಎನಿಮಲ್ ಕೇರ್ ಟ್ರಸ್ಟ್ನ ಪ್ರಮುಖರಾದ ಮಮತಾ ರಾವ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಪರಿಸರದ 146 ಸಾಕು ನಾಯಿಗಳಿಗೆ ಉಚಿತವಾಗಿ ರೇಬಿಸ್ ನಿರೋಧಕ ಲಸಿಕೆ ನೀಡಲಾಯಿತು. ಈ ಮೂಲಕ ಸಾರ್ವಜನಿಕರಲ್ಲಿ ರೇಬಿಸ್ ಕಾಯಿಲೆ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಹಲವು ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳನ್ನು ಪ್ರಾಣಿ ಪ್ರಿಯರು ದತ್ತು ಪಡೆದು ಅವುಗಳಿಗೆ ಆಶ್ರಯ ಕಲ್ಪಿಸಿದರು.
ಎನಿಮಲ್ ಕೇರ್ ಟ್ರಸ್ಟ್ ಮಂಗಳೂರಿನ ವೈದ್ಯರು ಮತ್ತು ಸ್ವಯಂಸೇವಕರ ತಂಡ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿತು.
ಕುಮಾರಿ ಕೀರ್ತನಾ ಯು.ಕೆ. ಪ್ರಾರ್ಥಿಸಿದರು. ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರದ ಕಾರ್ಯದರ್ಶಿ ಜಯದೇವ್ ಸ್ವಾಗತಿಸಿದರು. ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.) ಕೊಲ್ಯದ ಕಾರ್ಯದರ್ಶಿ ರಾಜೇಶ್ ಕುಮಾರ್ ಕೆ.ಎಸ್. ವಂದಿಸಿದರು. ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕಾಸಿಕೆಟ್ಟು ಕಾರ್ಯಕ್ರಮ ನಿರೂಪಿಸಿದರು.